ಬೆಂಗಳೂರು, ಆ (DaijiworldNews/HR): ಮಂಗಳವಾರ ರಾತ್ರಿ ಕೆ ಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿದ್ದ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ 35 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ.
ಆಗಸ್ಟ್ 11ರಂದು ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗನಾದ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ಪ್ರತಿಭಟನೆ ಹೆಸರಲ್ಲಿ ಗಲಭೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಗೊಂಡಿದ್ದು, ಈವರೆಗೂ 340 ಮಂದಿಯನ್ನು ಬಂಧಿಸಿದ್ದಾರೆ.
ಶನಿವಾರದಂದು ಒಂದೇ ದಿನ 85 ಮಂದಿಯನ್ನು ಬಂಧಿಸಿದ್ದು, ಆದಿತ್ಯವಾರ ಮತ್ತೆ 35 ಮಂದಿಯನ್ನು ಬಂಧಿಸಿದ್ದಾರೆ.
ಇನ್ನು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 45 ಎಫ್ಐಆರ್ ಕೇಸ್ ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಗಲಭೆಯಲ್ಲಿ ಭಾಗಿಯಾಗಿರುವವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಬಂಧಿತರ ಸಂಖ್ಯೆ 1 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.