ಬೆಂಗಳೂರು, ಆ 16 (DaijiworldNews/PY): ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 18ರವರೆಗೂ ನಿಷೇಧಾಜ್ಞೆ ಇರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಇಂದಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ ಕೂಡಾ ಮುಂಜಾಗ್ರತೆಯ ಸಲುವಾಗಿ ಆಗಸ್ಟ್ 18ರ ಬೆಳಿಗ್ಗೆ 6 ಗಂಟೆಯವರೆಗೆ ಮಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಅವರಿಗೆ ಭದ್ರತೆ ಇಲ್ಲ ಎಂದು ಹೇಳಿರುವ ಕಾರಣ ಅವರಿಗೆ ಭದ್ರತೆ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಮೊದಲು ಆಗಸ್ಟ್ 16ರವರೆಗೆ 6 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಇಂದು ಮತ್ತ ನಿಷೇಧಾಜ್ಞೆಯನ್ನು ಆಗಸ್ಟ್ 18ರ ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಲಾಗುತ್ತದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.