ಮಿಜೋರಾಂ, ಆ 16 (DaijiworldNews/PY): ಮಿಜೋರಾಂ-ತ್ರಿಪುರ ಗಡಿ ಬಳಿ ಇರುವ ರಸ್ತೆ ನಿರ್ಮಾಣ ಸ್ಥಳದಲ್ಲಿ ಉಂಟಾಗಿರುವ ಭೂಕುಸಿತದ ಜಾಗದಲ್ಲಿ ರಾಶಿ ರಾಶಿ ತಲೆಬುರುಡೆಗಳು ಸೇರಿದಂತೆ ಮೂಳೆಗಳು, ಆಭರಣಗಳು ಪತ್ತೆಯಾಗಿವೆ.
ಮಾಮಿತ್ ಜಿಲ್ಲೆಯ ತ್ರಿಪುರ ಗಡಿಯ ಸಮೀಪವಿರುವ ಟುಯಿಡಾಮ್-ಕಾವರ್ಟೆ ರಸ್ತೆ ನಿರ್ಮಾಣ ಹಂತದಲ್ಲಿದೆ ಎಂದು ಮಾಮಿತ್ ಜಿಲ್ಲಾಧಿಕಾರಿ ಡಾ.ಲಾಲ್ರೋಜಾಮ ಹೇಳಿದ್ದಾರೆ.
ರಸ್ತೆ ನಿರ್ಮಾಣ ಹಂತದಲ್ಲಿದ್ದು, ಈ ವೇಳೆ ಬೆಟ್ಟವನ್ನು ಭಾರಿ ಯಂತ್ರಗಳ ಸಹಾಯದಿಂದ ಕೆಡವಲಾಗಿದ್ದು, ಈ ಕಾರಣದಿಂದಾಗಿ ಬೆಟ್ಟ ಕುಸಿದಿದೆ. ಈ ವೇಳೆ 12 ತಲೆಬುರುಡೆಗಳು, ಮೂಳೆಗಳು ಸೇರಿದಂತೆ ಆಭರಣಗಳು, ಧೂಮಪಾನದ ಪೈಪ್ ದೊರಕಿದ್ದು ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿ ಪತ್ತೆಯಾದ ಎಲ್ಲಾ ವಸ್ತುಗಳ ಬಗ್ಗೆ ಪ್ರತಿಕ್ರಿಸಲು ಸಾಧ್ಯವಿಲ್ಲ. ಆದರೆ, ತಲೆಬುರುಡೆ ಹಾಗೂ ಮೂಳೆಗಳು ಖಂಡಿತವಾಗಿ ಮಾನವನದೇ. ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಇಲ್ಲದೇ ಅವು ಎಷ್ಟು ಹಳೆಯವು ಎನ್ನುವುದನ್ನು ತಿಳಿಸಲು ಸಾಧ್ಯವಿಲ್ಲ. ವಸ್ತುಗಳನ್ನು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.
ಸ್ಥಳೀಯರು ಈ ಬಗ್ಗೆ ತಿಳಿಸಿದ ನಂತರ ಪೊಲೀಸರು ಇದಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಮಿಜೋರಾಂನಲ್ಲಿ ಮಣ್ಣಿನ ಮಡಿಕೆ ಸೇರಿದಂಯೆ ಅಸ್ಥಿಪಂಜರಗಳನ್ನು ಪತ್ತೆ ಮಾಡಲಾಗಿತ್ತು. ಅಲ್ಲದೇ, ಕೆಲವು ತಿಂಗಳುಗಳ ಹಿಂದೆ ಮಿಜೋರಾಂ ಗಡಿಯ ಸಮೀಪದ ತ್ರಿಪುರಾದಲ್ಲಿರುವ ಜಂಪೂಯಿ ಬೆಟ್ಟಗಳಲ್ಲಿ ಹಾಗೂ ಕಳೆದ ವರ್ಷ ಐಜಾಲ್ನಿಂದ 20 ಕಿ.ಮೀ ದೂರದಲ್ಲಿರುವ ಎರಡು ಸ್ಥಳಗಳಲ್ಲಿ ಇಂತಹ ಅವಶೇಷಗಳು ಪತ್ತೆಯಾಗಿದ್ದವು ಎಂದು ಪುರಾತತ್ವ ಸಮೀಕ್ಷೆಯ ಪುರಾತತ್ವಶಾಸ್ತ್ರಜ್ಞ ಉಪ ಅಧೀಕ್ಷಕ ಡಾ. ಸುಜೀತ್ ನಾಯನ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ಕ್ರಿ.ಶ 8ರಿಂದ 14ನೇ ಶತಮಾನದ ಹಿಂದಿನದ್ದು ಎಂದು ಕಾಣುತ್ತದೆ. ಆದರೆ, ನಾನು ಈಗಲೇ ಈ ಬಗ್ಗೆ ಖಚಿತವಾಗಿ ಹೇಳಲಾರೆ ಎಂದು ತಿಳಿಸಿದ್ದಾರೆ.