ಹೊಸದಿಲ್ಲಿ, ಆ (DaijiworldNews/HR): ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ ಹಿಮರಾಶಿಯೊಳಗೆ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಯೋಧನ ಮೃತದೇಹ ಪತ್ತೆಯಾಗಿದೆ.
ಭಾರತೀಯ ಸೇನೆಯ 11 ಗರ್ವಾಲ್ ರೈಫಲ್ಸ್ಗೆ ಸೇರಿರುವ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಕಾಶ್ಮೀರ ಸಮೀಪದ ಗುಲ್ಮಾರ್ಗ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ ಭಾರೀ ಹಿಮರಾಶಿಯಲ್ಲಿ ಆಕಸ್ಮಿಕವಾಗಿ ಜಾರಿಬಿದ್ದ ಬಳಿಕ ನಾಪತ್ತೆಯಾಗಿದ್ದರು.
ಇದೀಗ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಅವರ ಕುಟುಂಬಕ್ಕೆ ತಕ್ಷಣವೇ ಮಾಹಿತಿ ನೀಡಲಾಗಿದ್ದು, ಹುತಾತ್ಮ ಯೋಧನಿಗೆ 36 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ.
ರಾಜೇಂದ್ರ ಸಿಂಗ್ ನೇಗಿ ಅವರನ್ನು ಹುಡುಕಿ ಸಿಗದಿದ್ದಾಗ ಸೇನೆಯು ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರಿಗೆ ಜೂ.21ರಂದು ಪತ್ರ ಬರೆದು ಮಾಹಿತಿಯನ್ನು ನೀಡಿದ್ದರು. ಆದರೆ ನೇಗಿ ಅವರ ಪತ್ನಿ ಮೃತದೇಹವನ್ನು ಕಣ್ಣಾರೆ ನೋಡದೆ ಸಾವಿನ ಸುದ್ದಿಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು.
ಇದೀಗ ಶನಿವಾರ ಸ್ವಾತಂತ್ರ್ಯದ ದಿನದಂದು ನೇಗಿಯವರ ಮೃತದೇಹ ಪತ್ತೆಯಾಗಿದ್ದು, ಆರ್ಮಿ ಘಟಕದವರು ಅವರ ಕುಟುಂಬ ಸದಸ್ಯರಿಗೆ ಮಾಹಿತಿಯನ್ನುನೀಡಿದ್ದಾರೆ.