ಹೈದರಾಬಾದ್, ಆ (DaijiworldNews/HR): ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಅವರನ್ನು ತೆಲಂಗಾಣ ಸರ್ಕಾರದ ಡೆಪ್ಯುಟಿ ಕಲೆಕ್ಟರ್ ಹುದ್ದೆಗೆ ನೇಮಕ ಮಾಡಲಾಗಿದೆ.
ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಅವರು ಮೃತಪಟ್ಟಿದ್ದರು.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಸಂತೋಷಿ ಅವರನ್ನು ಕಂದಾಯ ಇಲಾಖೆಯ ಉಪ ಕಲೆಕ್ಟರ್ ಆಗಿ ನೇಮಕ ಮಾಡಲಾಗಿದೆ.
ಸಂತೋಷಿ ಅವರು ತರಬೇತಿ ಪಡೆದು ತಮ್ಮ ಉದ್ಯೋಗದಲ್ಲಿ ಮುಂದುವರೆಯುವವರೆಗೆ ಅವರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿಯವರು ತಮ್ಮ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್ ಅವರಿಗೆ ಸೂಚಿಸಿದ್ದಾರೆ.
ಸಂತೋಷ್ ಬಾಬು ಅವರ ನಿವಾಸಕ್ಕೆ ಜೂನ್ 22 ರಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಭೇಟಿ ನೀಡಿ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಅಷ್ಟೇ ಅಲ್ಲದೆ ಸ್ಥಳದಲ್ಲೇ ₹5 ಕೋಟಿ ಪರಿಹಾರ ಘೋಷಿಸಿದ್ದರು.