ಬೆಂಗಳೂರು, ಆ (DaijiworldNews/HR): ಕರ್ನಾಟಕದ ಜಿಡಿಪಿ ಸುಸ್ಥಿರ ಮತ್ತು ಸದೃಢವಾಗಿ ಬೆಳೆಯುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಅದರ ಪ್ರಮಾಣ 35 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಈ ಬಗ್ಗೆ ಭವಿಷ್ಯದ ಕರ್ನಾಟಕ ಶೃಂಗಸಭೆ- 2020ಯಲ್ಲಿ ಆನ್ಲೈನ್ ಮೂಲಕವೇ ಭಾಷಣ ಮಾಡಿದ ಅವರು, ರಾಜ್ಯವು ಈಗಾಗಲೇ 18 ಲಕ್ಷ ಕೋಟಿ ರೂ. ಜಿಡಿಪಿಯನ್ನು ಹೊಂದಿದ್ದು, ಐದು ವರ್ಷಗಳಲ್ಲಿ ಇದರ ಪ್ರಮಾಣ 36 ಲಕ್ಷ ಕೋಟಿ ರೂ. ದಾಟಲಿದೆ. ಅನಂತರದ ಐದು ವರ್ಷಗಳಲ್ಲಿ 75 ಲಕ್ಷ ಕೋಟಿ ರೂ. ಜಿಡಿಪಿ ಹೊಂದುವುದು ನಮ್ಮ ಗುರಿ ಎಂದು ಹೇಳಿದರು.
ಕೃಷಿ, ಐಟಿ-ಬಿಟಿ, ಕೈಗಾರಿಕೆ, ಉತ್ಪಾದನೆ ಹಾಗೂ ಸೇವಾ ವಲಯಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಐದು ವರ್ಷಗಳಲ್ಲಿ ನಿಗದಿತ ಮೈಲುಗಲ್ಲು ದಾಟಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು.
ಇನ್ನು ಇದರ ಜೊತೆಗೆ ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಲು ಸರಕಾರ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಮೈಸೂರು- ಬೀದರ್ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು- ಚೆನ್ನೈ ಮತ್ತು ಬೆಂಗಳೂರು- ಮುಂಬಯಿ ಕಾರಿಡಾರ್’ಗಳಂತೆ ಈ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕೋವಿಡ್-19 ಸೋಂಕು ಸದ್ಯ ರಾಜ್ಯದಲ್ಲಿ ನಿಯಂತ್ರಣದಲ್ಲಿದ್ದು, ಸರಕಾರದ ವಶದಲ್ಲಿರುವ ಒಟ್ಟು ಕೋವಿಡ್ ಹಾಸಿಗೆಗಳ ಪೈಕಿ ಶೇ.30ರಷ್ಟು ಖಾಲಿ ಇವೆ. ಬೇಡಿಕೆಗಿಂತ ಹೆಚ್ಚು ಸೌಲಭ್ಯಗಳೇ ನಮ್ಮಲ್ಲಿದೆ ಹೀಗಾಗಿ ಯಾವುದೇ ಆತಂಕವಿಲ್ಲ ಎಲ್ಲ ದೈರ್ಯದಿಂದ ಇರಬಹುದು ಎಂದು ಹೇಳಿದರು.