ಮುಂಬೈ, ಆ. 16 (DaijiworldNews/MB) : ''ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ವೇಳೆ ಉಪಸ್ಥಿತಿ ಇದ್ದ ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾದರೆ ನೃತ್ಯ ಗೋಪಾಲ್ ದಾಸ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕ್ವಾರಂಟೈನ್ಗೆ ಒಳಗಾಗುವುದಿಲ್ಲವೇ?'' ಎಂದು ಶಿವಸೇನೆ ಪ್ರಶ್ನಿಸಿದೆ.
ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಂಸದ ಸಂಜಯ್ ರಾವತ್ ಅವರು, ''ಪ್ರಧಾನಿ ಮೋದಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲಿದ್ದಾರಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕ್ವಾರಂಟೈನ್ಗೆ ಒಳಗಾಗುವುದಿಲ್ಲವೇ?'' ಎಂದಿದ್ದಾರೆ.
''ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆ ನೃತ್ಯ ಗೋಪಾಲ್ ದಾಸ್ ಅವರು ಭಾಗಿಯಾಗಿದ್ದರು. ಅವರಿಗೆ ಈಗ ಕೊರೊನಾ ಪಾಸಿಟಿವ್ ಆಗಿದೆ. ಅವರು ಮಾಸ್ಕ್ ಕೂಡಾ ಧರಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೋದಿಯವರು ಭಕ್ತಿಯಿಂದ ಗೋಪಾಲ್ ದಾಸ್ ಅವರ ಕೈಗಳನ್ನೂ ಕೂಡ ಸ್ಪರ್ಶಿಸಿದ್ದರು. ಹೀಗಿರುವಾಗ ನಿಯಮ ಪ್ರಕಾರವಾಗಿ ಮೋದಿ ಕೂಡಾ ಕ್ವಾರಂಟೈನ್ಗೆ ಒಳಗಾಗಬೇಕಲ್ಲವೇ'' ಎಂದು ರಾವತ್ ಪ್ರಶ್ನಿಸಿದ್ದಾರೆ.
ಹಾಗೆಯೇ ಇತರ ಹಲವು ಸಚಿವರಿಗೆ ಕೊರೊನಾ ಸೋಂಕು ತಗುಲಿರುವ ಬಗೆಯೂ ಉಲ್ಲೇಖ ಮಾಡಿದ್ದಾರೆ.