ಬೆಳಗಾವಿ, ಆ. 16 (DaijiworldNews/MB) : ಕೊರೊನಾ ಸೋಂಕು ಭೀತಿಯಿಂದಾಗಿ ಯಾರ ಸಹಾಯವೂ ದೊರೆಯದ ಕಾರಣ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಮೃತದೇಹವನ್ನು ಕುಟುಂಬಸ್ಥರು ಸೈಕಲ್ನಲ್ಲಿಯೇ ಸಾಗಾಟ ಮಾಡಿರುವ ಹೃದಯವಿದ್ರಾವಕ ಘಟನೆ ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆದಿದೆ.
ಗಾಂಧಿ ನಗರ ನಿವಾಸಿ 71 ವರ್ಷದ ವೃದ್ದ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕುಟುಂಬ ಸದಸ್ಯರು ಶನಿವಾರ ಅವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸಲಾಗಿತ್ತು.
ಬಳಿಕ ಮನೆಗೆ ಬಂದ ಅವರು ಭಾನುವಾರ ಬೆಳಿಗ್ಗೆ 6 ಗಂಟೆಗೆ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸಲು ಆಂಬ್ಯುಲೆನ್ಸ್ ಒದಗಿಸುವಂತೆ ಮೃತ ಪತ್ನಿ ಗಂಗವ್ವಾ ಪಿಎಚ್ಸಿಯ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಸೈಕಲ್ನಲ್ಲೇ ಮೃತದೇಹ ಸಾಗಿಸಿದ್ದಾರೆ ಎಂದು ವರದಿಯಾಗಿದೆ.