ಬೆಂಗಳೂರು, ಆ. 17 (DaijiworldNews/MB) : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ತಾನು ಹುಟ್ಟಿ ಬೆಳೆದ ಮನೆಯನ್ನು ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನಾನು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಜೆಡಿಎಸ್ ನಾಯಕರಾಗಿದ್ದ ಶ್ರೀನಿವಾಸ್ ಮೂರ್ತಿ ಅವರು, 2017 ರಲ್ಲಿ ಕಾಂಗ್ರೆಸ್ಗೆ ಸೇರಿದ್ದಾರೆ. ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯ (ಎಸ್)ನ ಪ್ರಸನ್ನ ಕುಮಾರ್ ಅವರನ್ನು ಸೋಲಿಸಿದ್ದರು. ಇತ್ತೀಚೆಗೆ ನಡೆದ ಗಲಭೆಯಿಂದಾಗಿ ಅವರು ಮನೆ ಕಳೆದುಕೊಂಡಿದ್ದರೂ ಕಾಂಗ್ರೆಸ್ ಅವರನ್ನು ಬೆಂಬಲಿಸಿಲ್ಲ. ಈ ಹಿನ್ನೆಲೆ ಶ್ರೀನಿವಾಸ್ ಮೂರ್ತಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ನಾಯಕರು ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಭೇಟಿ ನೀಡಿ ಮಾತನಾಡಿದ ಬೆನ್ನಲ್ಲೇ ಅಖಂಡ ಶ್ರೀನಿವಾಸ ಮೂರ್ತಿ ಅವರು ಬಿಜೆಪಿಗೆ ಸೇರುತ್ತಾರೆ ಎಂದು ವದಂತಿಗಳು ಹಬ್ಬಿದ್ದವು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಶ್ರೀನಿವಾಸ್ ಮೂರ್ತಿ ಅವರು, ''ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ'' ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್ನು ಗಲಭೆಯ ಬಗ್ಗೆ ಮಾತನಾಡಿದ ಅವರು, "ನಾನು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ಮನೆಗೆ ಬೆಂಕಿ ಹಚ್ಚುವ ಅವಶ್ಯಕತೆ ಏನು? ಶಾಸಕನಾಗಿರುವ ವ್ಯಕ್ತಿಗೆಯೇ ಈ ರೀತಿ ಆದರೆ ಉಳಿದ ಸಾಮಾನ್ಯ ವ್ಯಕ್ತಿಗಳ ಗತಿ ಏನು? ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು'' ಎಂದು ಆಗ್ರಹಿಸಿದ್ದಾರೆ.