ಜಮ್ಮು, ಆ. 17 (DaijiworldNews/MB) : ಕೋಮು ಪ್ರಚೋದಕ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮುವಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಜಮ್ಮುವಿನ ಸತ್ಪಾಲ್ ಶರ್ಮಾ ಮತ್ತು ಇನ್ನೊಬ್ಬ ಆರೋಪಿ ದೀಪಕ್ ಅವರನ್ನು ಬಂಧಿಸಲಾಗಿದ್ದು ಎಫ್ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಜಮ್ಮುವಿನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮುಖೇಶ್ ಸಿಂಗ್ ಅವರು, ''ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ಸತ್ಪಾಲ್ ಶರ್ಮಾ ಎಂಬಾತ ಕೋಮು ಭಾವನೆಗಳನ್ನು ಪ್ರಚೋದಿಸುವಂತಹ ಮಾತುಗಳನ್ನು ಹೇಳಿರುವುದು ಕಂಡುಬಂದಿದೆ'' ಎಂದು ಹೇಳಿದ್ದಾರೆ.
ಇನ್ನು ವಿಡಿಯೋದಲ್ಲಿ ಇನ್ನೋರ್ವ ವ್ಯಕ್ತಿ ಇದ್ದು ಆತನನ್ನು ರೋಹಿತ್ ಎಂಬಾತನೆಂದು ಗುರುತಿಸಲಾಗಿದೆ. ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದು ಈ ರೀತಿ ಕೋಮು ಪ್ರಚೋದನ ವಿಡಿಯೋ, ಸಂದೇಶಗಳನ್ನು ಹರಡುವವರ ವಿರುದ್ದ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.