ಜಮ್ಮು, ಆ. 17 (DaijiworldNews/MB) : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ 370ನೇ ವಿಧಿ ರದ್ದತಿ ಮಾಡಿ ಒಂದು ವರ್ಷದ ಬಳಿಕ ಪ್ರಾಯೋಗಿಕವಾಗಿ ಜಮ್ಮು - ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರಾರಂಭ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಬಳಿಕ ಅಲ್ಲಿ 4ಜಿ ಇಂಟರ್ನೆಟ್ ರದ್ದು ಮಾಡಲಾಗಿದ್ದು ನಿರ್ದಿಷ್ಟ ಪ್ರದೇಶಗಳಲ್ಲಿ 4ಜಿ ಸೇವೆಗಳನ್ನು ಮತ್ತೆ ಆರಂಭ ಮಾಡುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಜಮ್ಮು ಕಾಶ್ಮೀರದ ಆಡಳಿತಕ್ಕೆ ಆಗಸ್ಟ್ 7 ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
ಇದರಂತೆ ಆಗಸ್ಟ್ 11 ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಆಗಸ್ಟ್ 15 ರ ನಂತರ ಜಮ್ಮು ಮತ್ತು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 4ಜಿ ಇಂಟರ್ನೆಟ್ ಸೇವೆಗಳ ಆರಂಭಕ್ಕೆ ಅವಕಾಶ ನೀಡಲಾಗುತ್ತದೆ. ಬಳಿಕ ಹಂತ ಹಂತವಾಗಿ ಬೇರೆ ಜಿಲ್ಲೆಗಳಲ್ಲೂ ಹೈಸ್ಪೀಡ್ ಇಂಟರ್ನೆಟ್ ಸೇವೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದರು.
ಇದೀಗ ಕಳೆದ ರಾತ್ರಿ ಗಂದೇರ್ಬಲ್ (ಕಾಶ್ಮೀರ) ಮತ್ತು ಉಧಂಪುರ್ (ಜಮ್ಮು ವಿಭಾಗ) ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆಗಳನ್ನು ಪ್ರಾಯೋಗಿಕವಾಗಿ ಪುನರ್ ಸ್ಥಾಪಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಇಲಾಖೆ, ಗಂದೇರ್ಬಲ್ (ಕಾಶ್ಮೀರ) ಮತ್ತು ಉಧಂಪುರ್ (ಜಮ್ಮು ವಿಭಾಗ) ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆಗಳನ್ನು ಪ್ರಾಯೋಗಿಕವಾಗಿ ಪುನರ್ ಸ್ಥಾಪಿಸಲಾಗಿದ್ದು ಉಳಿದ ಜಿಲ್ಲೆಗಳಲ್ಲಿ 2 ಜಿ ಇಂಟರ್ನೆಟ್ ಮಾತ್ರವಿದೆ ಎಂದು ಹೇಳಿದೆ.