ನವದೆಹಲಿ, ಆ. 17 (DaijiworldNews/MB) : ತಾವು ನಿರ್ವಹಣೆ ಮಾಡುವ ರೈಲುಗಳನ್ನು ಯಾವ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂಬ ಆಯ್ಕೆ ಸ್ವಾತಂತ್ರ್ಯವನ್ನು ಖಾಸಗಿ ಸಂಸ್ಥೆಯವರಿಗೆ ಕೇಂದ್ರ ನೀಡಿದ್ದು ಕೇಂದ್ರ ರೈಲ್ವೆ ಸಚಿವಾಲಯವು ಸಿದ್ದ ಪಡಿಸಿರುವ ರಿಯಾಯಿತಿ ಒಪ್ಪಂದದ ಕರಡು ಪ್ರತಿಯಲ್ಲಿ ಈ ಅಂಶವನ್ನು ಉಲ್ಲೇಖ ಮಾಡಲಾಗಿದೆ.
109 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರವು ಸಮ್ಮತಿಸಿದ್ದು ಇದು 2023ಕ್ಕೆ ಪ್ರಯಾಣ ಆರಂಭಿಸಲಿದೆ. ಕೇಂದ್ರ ಸರ್ಕಾರವು ರಿಯಾಯಿತಿ ಒಪ್ಪಂದದ ಕರಡು ಪ್ರತಿ ಸಿದ್ದಪಡಿಸಿದ್ದು ಇದರಲ್ಲಿ ರೈಲ್ವೆ ನಿಲ್ದಾಣ ಆಯ್ಕೆ ಸ್ವಾತಂತ್ರ್ಯ ಖಾಸಗಿಯವರಿಗೆ ನೀಡಿದ್ದು ಆದರೆ ಭಾರತೀಯ ರೈಲ್ವೆಗೆ ತಾವು ಆಯ್ಕೆ ಮಾಡುವ ರೈಲ್ವೆ ನಿಲ್ದಾಣದ ಪಟ್ಟಿ, ಸಮಯವನ್ನು ಮುಂಚಿತವಾಗಿಯೇ ನೀಡಬೇಕು. ಹಾಗೆಯೇ ಯಾವ ನಿಲ್ದಾಣದಲ್ಲಿ ರೈಲಿನ ನೀರಿನ ಟ್ಯಾಂಕರ್ಗಳನ್ನು ತುಂಬಲಾಗುತ್ತದೆ ಹಾಗೂ ಯಾವಾ ಮಾರ್ಗದಲ್ಲಿ ಭೋಗಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಎಂಬ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಹಾಗೆಯೇ ಒಂದು ವರ್ಷಗಳ ಕಾಲ ಈ ಮಾರ್ಗದ ಬದಲಾವಣೆಯನ್ನು ಮಾಡಲಾಗದು ಬಳಿಕ ಪರಿಷ್ಕರಣೆಗೆ ಅವಕಾಶ ನೀಡಲಾಗುತ್ತದೆ ಎಂದು ಕೂಡಾ ಕರಡಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಟಿಕೆಟ್ ದರದ ಸ್ವಾತಂತ್ರ್ಯವನ್ನೂ ಖಾಸಗಿಯವರಿಗೆ ನೀಡಲು ಭಾರತೀಯ ರೈಲ್ವೆ ತೀರ್ಮಾನಿಸಿದೆ.
ಖಾಸಗಿ ರೈಲುಗಳ ಸಂಚಾರದ ಮಾರ್ಗದಲ್ಲೇ ಭಾರತೀಯ ರೈಲ್ವೆಯ ಪ್ಯಾಸೆಂಜರ್ ರೈಲುಗಳು ಸಂಚರಿಸಲಿದೆ. ಖಾಸಗಿ ಸಂಸ್ಥೆಗಳು ದುಬಾರಿ ಟಿಕೆಟ್ ನಿಗದಿ ಮಾಡಿದ್ದಲ್ಲಿ ಪ್ರಯಾಣಿಕರು ಪ್ಯಾಸೆಂಜರ್ ರೈಲಿನಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಿ ರೈಲ್ವೆ ಸಂಚಾರಕ್ಕೆ ಆದ್ಯತೆ ನೀಡುವುದು ಇದರ ಉದ್ದೇಶ ಎಂದು ಹೇಳಲಾಗಿದ್ದು ರೈಲ್ವೇಯಲ್ಲೂ ಖಾಸಗೀಕರಣಕ್ಕೆ ವಿರೋಧ ವ್ಯಕ್ತವಾಗಿದೆ.