ಬೆಂಗಳೂರು, ಆ(DaijiworldNews/HR): ರಾಜ್ಯ ಸರ್ಕಾರ ಸುತ್ತೋಲೆಯ ಪ್ರಕಾರ ಕೋವಿಡ್ 19 ಕಾರಣದಿಂದ ಈ ವರ್ಷ ಎಲ್ಲಾ ನೇಮಕಾತಿಗಳನ್ನು ತಡೆಹಿಡಿಯಲು ಹೇಳಿದ್ದರೂ ಕೂಡ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ಆ. 24 ರಂದು ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಇದೀಗ ಶೇ 20ರಷ್ಟು ಸರ್ಕಾರಿ ನೌಕರರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅವರು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಲ್ಲಿ ಯಾರಿಗಾದರೂ ಸೋಂಕು ಇದ್ದರೆ ಅದು ಬೇರೆಯವರಿಗೆ ಸಾಧ್ಯತೆ ಇರುವ ಕಾರಣ ಮುಖ್ಯಮಮ್ತ್ರಿಯವರು ಈ ಬಗ್ಗೆ ತಕ್ಷಣ ಗಮನಹರಿಸಿ ಪರೀಕ್ಷೆ ಮುಂದೂಡಬೇಕು ಎಂದು ಹೇಳಿದ್ದಾರೆ.
ಇನ್ನು ಸಿದ್ಧರಾಮಯ್ಯ ಅವರ ಮಾತಿಗೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಮತ್ತು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಧ್ವನಿಗೂಡಿಸಿ, ಸರ್ಕಾರದ ಸುತ್ತೋಲೆ ಹೊರಡಿಸಿದ್ದರು ಅದನ್ನು ನಿರಾಕರಿಸಿ ಕೆಪಿಎಸ್ಸಿ ಪರೀಕ್ಷೆ ನಡೆಸುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಚಂದ್ರಶೇಖರ್ ಅವರು ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಪರೀಕ್ಷೆ ಬರೆಯುವ ಅನೇಕರು ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವುದರಿಂದ ಬರೆಯುವುದರಿಂದ ವಂಚಿತರಾಗಲಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅವಕಾಶ ಕೊಡುವುದಕ್ಕಾಗಿ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.