ನವದೆಹಲಿ, ಆ 17 (DaijiworldNews/PY): ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕೂಡಾ ನನ್ನ ಸಂಬಳವನ್ನು ಬಾಸ್ ಹೆಚ್ಚು ಮಾಡಿಲ್ಲ ಎಂದು ಕೋಪಗೊಂಡ ನೌಕರನೋರ್ವ ಕಂಪೆನಿಯಿಂದ 10 ಲಕ್ಷ ರೂ. ಅನ್ನು ಕದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆರೋಪಿಯನ್ನು ವಿಜಯ್ ಪ್ರತಾಪ್ ದೀಕ್ಷಿತ್ ಎನ್ನಲಾಗಿದೆ.
ಹಣ ಎಗರಿಸಿದ ವಿಜಯ್ ತನ್ನ ಮೇಲೆ ಪ್ರಕರಣ ದಾಖಲಾಗುತ್ತದೆ ಎನ್ನುವ ಭಯದಿಂದ ಖುದ್ದಾಗಿ ತಾನೇ ಪೊಲೀಸರಿಗೆ ಫೋನ್ ಮಾಡಿ 10 ಲಕ್ಷ ಕಳ್ಳತನವಾಗಿರುವ ಬಗ್ಗೆ ದೂರು ನೀಡಿ ಸಿಕ್ಕಿಬಿದ್ದಿದ್ದಾನೆ.
ಪೊಲೀಸರಿಗೆ ದೂರು ನೀಡಿದ್ದ ವಿಜಯ್, ಕಂಪೆನಿಯ ವ್ಯವಸ್ಥಾಪಕ ರಮೇಶ್ ಭಾಟಿಯಾ ಅವರಿಗೆ ನೀಡಲು 2 ಲಕ್ಷ ನಗದು ಹಾಗೂ 10 ಲಕ್ಷ ರೂ.ಗಳ ಚೆಕ್ ಅನ್ನು ನನ್ನ ಬಾಸ್ ನನಗೆ ನೀಡಿದ್ದರು. ನಾನು ಹಣವನ್ನು ತೆಗೆದುಕೊಂಡು ರಮೇಶ್ ಭಾಟಿಯಾ ಅವರಿಗೆ ನೀಡಲು ಹೋಗುತ್ತಿದ್ದ ಸಂದರ್ಭ ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹಣವನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದ.
ವಿಜಯ್ ನೀಡಿದ್ದ ದೂರನ್ನು ದಾಖಲಿಸಿಕೊಂಡ ಪೊಲೀಸರು, ಬಳಿಕ ಬಾಸ್ ನಿತಿನ್ ಅವರನ್ನು ವಿಚಾರಿಸಿದ್ದಾರೆ. ಈ ವೇಳೆ ಅವರು ನಾನು ಹಣ ನೀಡಿಲ್ಲ ಎಂದು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಅನುಮಾನಗೊಂಡ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಿಸಿದ್ದ ಸಂದರ್ಭ ವಿಜಯ್ ಸತ್ಯ ಬಾಯ್ಬಿಟ್ಟಿದ್ದಾನೆ. ಹಲವಾರು ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೇನೆ. ಆದರೂ ನನ್ನ ಸಂಬಳವನ್ನು ಹೆಚ್ಚಿಸಲಿಲ್ಲ. ಅಲ್ಲದೇ, ಕೆಲಸದ ವಿಚಾರವಾಗಿ ಬಾಸ್ ನನಗೆ ಎಲ್ಲರ ಎದುರು ಕೆನ್ನೆ ಬಾರಿಸಿದ್ದರು. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ನಾನು ಕಂಪೆನಿಯಿಂದ 10 ಲಕ್ಷ ಕದ್ದಿದ್ದಾಗಿ ಹೇಳಿದ್ದಾನೆ.
ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.