ಬೆಂಗಳೂರು, ಆ.17 (DaijiworldNews/HR): ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಮಾನವೀಯತೆ ಇಲ್ಲದೆ ಅಸಮರ್ಥವಾಗಿ ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರಿದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸಾವನ್ನಪ್ಪಿದ 70 ವರ್ಷದ ವ್ಯಕ್ತಿಯ ಮೃತ ದೇಹವನ್ನು ಸೈಕಲ್ನಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆಯನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಳೆಯ ನಡೆವೆ ಆ ವ್ಯಕ್ತಿಯ ಶವವನ್ನು ಸಂಬಂಧಿಕರು ಕಷ್ಟ ಪಟ್ಟು ಸೈಕಲ್ನಲ್ಲಿ ಸಾಗಿಸುವ ವಿಡಿಯೋವನ್ನು ಟ್ವೀಟರ್ ನಲ್ಲಿ ಡಿಕೆಶಿ ಪೋಸ್ಟ್ ಮಾಡಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿರುವ ಡಿಕೆಶಿ ನಿಮ್ಮ ಸರ್ಕಾರ ಎಲ್ಲಿ ಹೋಗಿದೆ, ಶವ ಸಾಗಿಸಲು ಆಂಬ್ಯುಲೆನ್ಸ್ ಅನ್ನು ಯಾಕೆ ಒದಗಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸರ್ಕಾರ ಪೂರ್ತಿಯಾಗಿ ವಿಫಲಗೊಂಡಿದ್ದು, ಇದೊಂದು ಮನುಷ್ಯತ್ವ ಇಲ್ಲದ ಅಸಮರ್ಥ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸಲು ಆಂಬ್ಯುಲೆನ್ಸ್ ಒದಗಿಸುವಂತೆ ಮೃತರ ಪತ್ನಿ ಗಂಗವ್ವಾ ಪಿಎಚ್ಸಿಯ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಸೈಕಲ್ನಲ್ಲೇ ಮೃತದೇಹ ಸಾಗಿಸಿದ್ದರು.