ರಾಮನಗರ, ಆ. 17 (DaijiworldNews/MB) : ತಾಕತ್ತಿದ್ದರೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ನಿಷೇಧಿಸಿ ಎಂದು ಬಿಜೆಪಿಗೆ ಶಾಸಕ ರಾಮಲಿಂಗಾ ರೆಡ್ಡಿ ಸವಾಲೆಸೆದಿದ್ದು ಎಸ್ಡಿಪಿಐನ ಪೋಷಕರೇ ಬಿಜೆಪಿಯವರು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ''ಬಿಜೆಪಿಯು ಕಾಂಗ್ರೆಸ್ನ ಮತ ವಿಭಜನೆ ಮಾಡುವ ಷಡ್ಯಂತ್ರ ರೂಪಿಸಿದೆ. ಗಲಭೆಗಳು ಆದ ಸಂದರ್ಭದಲ್ಲಿ ಮಾತ್ರ ಎಸ್ಡಿಪಿಐ ನಿಷೇಧ ಮಾಡುವ ಬಗ್ಗೆ ಹೇಳುತ್ತಾರೆ. ನಿಜವಾಗಿ ಎಸ್ಡಿಪಿಐನ ಪೋಷಕರೇ ಬಿಜೆಪಿಯವರು. ಬರೀ ಹೇಳಿಕೆಗೆ ಮಾತ್ರ ಎಸ್ಡಿಪಿಐ ಹಾಗೂ ಪಿಎಫ್ಐ ನಿಷೇಧ ಸೀಮಿತವಾಗಿದೆ'' ಎಂದು ಆರೋಪಿಸಿದ್ದಾರೆ.
''ಬಿಜೆಪಿ ಸರ್ಕಾರದಿಂದಾಗಿ ಕಾನೂನು ಸುವ್ಯವಸ್ಥೆ ದುಸ್ಥಿತಿಯಲ್ಲಿದ್ದು ಶಾಸಕರಿಗೂ ರಕ್ಷಣೆ ಇಲ್ಲದ ಸ್ಥಿತಿ ಉಂಟಾಗಿದೆ. ಕಳೆದ ಐದು ದಿನದಿಂದ . ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದ್ದು ಈವರೆಗೂ ಸರ್ಕಾರ ಯಾವುದೇ ರಕ್ಷಣೆ ಒದಗಿಸಿಲ್ಲ'' ಎಂದು ಸರ್ಕಾರದ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ.
ಇನ್ನು ''ಸರ್ಕಾರವು ಈ ಪ್ರಕರಣದ ಆರೋಪಿಗಳು ಕೇವಲ ಗುಂಪಿನವರು ಎಂಬಂತೆ ಬಿಂಬಿಸುತ್ತಿದೆ. ಆದರೆ ಪ್ರಕರಣಕ್ಕೆ ನಿಜವಾಗಿ ನವೀನ್ ಕೂಆ ಆರೋಪಿ. ಕಾಂಗ್ರೆಸ್ ಈ ಬಗ್ಗೆ ದಾಖಲೆ ಸಮೇತವಾಗಿ ಮಾಹಿತಿ ನೀಡಿದ ಬಳಿಕ ಬಿಜೆಪಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದಲ್ಲಿ ತೊಡಗಿದೆ'' ಎಂದು ದೂರಿದ್ದಾರೆ.