ಬೆಂಗಳೂರು, ಆ. 17 (DaijiworldNews/HR): ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು 70 ವರ್ಷದ ವೃದ್ದೆಯ ಕತ್ತು ಕೊಯ್ದು ಕೊಲೆ ಮಾಡಿ 45 ಲಕ್ಷ ನಗದು ಹಾಗೂ ಚಿನ್ನಾಭರಣ ಸಹಿತ ಪರಾರಿಯಾದ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೃದ್ದೆಯ ಪತಿ ವಿದ್ಯುತ್ ಬಿಲ್ ಪಾವತಿಸಲೆಂದು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿ ವೃದ್ದೆ ಒಬ್ಬರೇ ಇರುವಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಪತಿ ಮನೆಗೆ ಬರುವಾಗ ಟಿ. ವಿ ಆನ್ ಆಗಿ ಇದ್ದು, ಪತ್ನಿಯ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿತ್ತು ಎಂದು ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಮಂಚದ ಕೆಳಗೆ ಇಟ್ಟಿದ್ದ ಕಬ್ಬಿಣದ ಟ್ರಂಕ್ಗಳನ್ನು ಹೊರಗೆ ತೆಗೆದು ಬಿಸಾಡಲಾಗಿದ್ದು, ಅದರಲ್ಲಿ ಇದ್ದ 45 ಲಕ್ಷ ನಗದನ್ನು ವೃದ್ದೆಯ ಕತ್ತು ಕೊಯ್ದಿ ಆರೋಪಿಗಳು ದೋಚಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಪರಿಚಯಸ್ಥರೇ ಶಾಮೀಲಾಗಿದ್ದಾರೆ ಎಂಬ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.