ಬೆಂಗಳೂರು, ಆ.17 (DaijiworldNews/HR): ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಆಸ್ತಿ-ಪಾಸ್ತಿಯ ನಷ್ಟವಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಗಲಭೆಕೋರ ಆರೋಪಿಗಳಿಂದಲೇ ನಷ್ಟದ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ಕುರಿತು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಇಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಪೊಲೀಸ್ ಇಲಾಖೆಯೂ ಗಲಭೆಯ ಬಗ್ಗೆ ತನಿಖೆ ನಡೆಸುತ್ತಿದೆ. ಈ ತನಿಖೆ ಮುಗಿಯುವವರೆಗೂ ಬೇರೆ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ತಿಳಿಸಿದರು.
ಇನ್ನು ಗಲಭೆಕೋರರ ಹಿಂದೆ ಉಗ್ರ ಸಂಘಟನೆ ಲಿಂಕ್ ಇದೆಯಾ ಎನ್ನುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದ್ದು, ಬಂಧನಕ್ಕೊಳಗಾದ ಆರೋಪಿಗಳ ಹಿನ್ನಲೆಯನ್ನು ಕೂಡ ತನಿಖೆ ನಡೆಸಲಾಗುತ್ತದೆ. ವಿಚಾರಣೆಗೆ 3 ಸದಸ್ಯರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಗಲಭೆಕೋರರಿಂದಲೇ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಆಸ್ತಿ ಪಾಸ್ತಿ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.