ಛತ್ತೀಸ್ ಗಡ, ಆ 17 (DaijiworldNews/PY): ವ್ಯಕ್ತಿಯೋರ್ವ ಅಣೆಕಟ್ಟಿನಿಂದ ಹೊರಕ್ಕೆ ಬಿಟ್ಟ ನೀರಿಗೆ ಜಿಗಿದು ಸುಮಾರು 16 ಗಂಟೆಗಳ ಕಾಲ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ನೆರವಿನಿಂದ ಪಾರಾದ ಘಟನೆ ಛತ್ತೀಸ್ಗಡದ ಬಿಲಾಸ್ಪುರ ಎಂಬಲ್ಲಿ ನಡೆದಿದೆ.
ನೀರಿಗೆ ಜಿಗಿದ ವ್ಯಕ್ತಿಯನ್ನು ಗಾಢವಾರಿ ಹಳ್ಳಿಯ ಜಿತೇಂದ್ರ ಕಶ್ಯಪ್ ಎಂದು ಜಿಲಾಸ್ಪುರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ತಾಣವಾದ ಖುತಘಾಟ್ನ ಅಣೆಕಟ್ಟೆಯಲ್ಲಿ ನೀರಿನ ಹರಿವನ್ನು ನೋಡುವ ಸಲುವಾಗಿ ಹಲವಾರು ಪ್ರವಾಸಿಗರು ಧಾವಿಸಿದ್ದರು. ಈ ವೇಳೆ ಪ್ರವಾಸಿಗರ ಪೈಕಿ ಓರ್ವ ವ್ಯಕ್ತಿ ನೀರಿಗೆ ಜಿಗಿದಿದ್ದಾನೆ. ಪರಿಣಾಮ ಆತನಿಗೆ ದಡ ಸೇರಲು ಆಗದೇ ಬಳಿಕ ಮರದ ಕೊಂಬೆಯನ್ನು ಹಿಡಿದು ಸಹಾಯಕ್ಕಾ ಬೇಡಿದ್ದಾನೆ.
ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಆತನ ರಕ್ಷಣೆಯ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಅಲ್ಲದೇ ಭಾರಿ ಮಳೆಯಾದ ಹಿನ್ನೆಲೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವೂ ಹೆಚ್ಚಿತ್ತು. ಈ ಸಂದರ್ಭ ಬಿಲಾಸ್ಪುರ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ಪೊಲೀಸರು ವಾಯುಸೇನೆಯ ಸಹಾಯ ಕೋರಿದ್ದು, ಯಾವುದೇ ಪ್ರತಿಕೂಲ ಹವಾಮಾನ ಇಲ್ಲದೇ ಇದ್ದ ಕಾರಣ ಸೋಮವಾರ ಮುಂಜಾನೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ, ಹೆಲಿಕಾಫ್ಟರ್ ಸಹಾಯದಿಂದ ಜಿತೇಂದ್ರ ಕಶ್ಯಪ್ ಅನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.