ಬೆಂಗಳೂರು, ಆ 17 (DaijiworldNews/PY): ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಮಾಜಿ ಶಾಸಕ ರೋಶನ್ ಬೇಗ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಮೀರ್, ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ ರೋಶನ್ ಬೇಗ್ ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು ಎಂದಿದ್ದಾರೆ.
ಡಿಜೆಹಳ್ಳಿ ಗಲಭೆ ಬಗ್ಗೆ ಇಲ್ಲಿಯವರೆಗೆ ಮೌನವಹಿಸಿದ್ದ ರೋಶನ್ ಬೇಗ್ ಅವರು ಇದ್ದಕ್ಕಿದ ಹಾಗೆ ಎಸ್ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ ರೋಶನ್ ಬೇಗ್ ಅವರು ಕಾಂಗ್ರೆಸ್ ಮತ್ತು ಎಸ್ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಮಾನ್ಯ ರೋಶನ್ ಬೇಗ್ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳ ಬಡ ವರ್ಗಗಳನ್ನು ಎಸ್ಡಿಪಿಐ ಅಥವಾ ಕಾಂಗ್ರೆಸ್ ಬಳಸಿಕೊಳ್ಳಬಾರದು. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಎಸ್ಡಿಪಿಐಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ, ಅವರಿಗೆ ತಮ್ಮದೇ ಶಾಸಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದರು.