ನವದೆಹಲಿ, ಆ.17 (DaijiworldNews/HR): ಫೇಸ್ಬುಕ್ ಇಂಡಿಯಾ ಸರ್ಕಾರಕ್ಕೆ ಪೂರಕವಾಗಿ ನಡೆದುಕೊಂಡಿದೆ ಎಂಬ ವಿಚಾರಕ್ಕೆ ಸಂಬಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್, ದ್ವೇಷದ ಮಾತು ಮತ್ತು ಹಿಂಸಾಚಾರ ಪ್ರಚೋದಿಸುವ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯು ನಿಷೇಧಿಸುತ್ತದೆ. ಅದಲ್ಲದೇ ಯಾವುದೇ ರೀತಿಯ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಈ ನೀತಿಯನ್ನು ಜಾಗತಿಕವಾಗಿ ಜಾರಿಗೋಳಿಸಿದೆ ಎಂದು ಹೇಳಿಕೊಂಡಿದೆ.
ಯಾರೊಬ್ಬರ ರಾಜಕೀಯ ಪಕ್ಷ ಅಥವಾ ಸ್ಥಾನವನ್ನು ಪರಿಗಣಿಸದೆ ನಾವು ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತೇವೆ. ದ್ವೇಷದ ಅಂಶಗಳನ್ನು ತಡೆಯಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ನಮಗೆ ತಿಳಿದಿದೆ. ಆದರೂ, ನಾವು ನಿಯಮಗಳನ್ನು ಜಾರಿಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ಈ ಮೂಲಕ ನ್ಯಾಯ ಮತ್ತು ನಿಖರತೆಯನ್ನು ಖಚಿತಪಡಿಸುತ್ತೇವೆ ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ.
ಇನ್ನು ಬಿಜೆಪಿಯ ಒಬ್ಬ ಮತ್ತು ಇತರ ಮೂರು ಮುಖಂಡರ ದ್ವೇಷ ಭಾಷಣದ ಬಗ್ಗೆ ಫೇಸ್ಬುಕ್ ಇಂಡಿಯಾ ಮೌನ ವಹಿಸಿದೆ. ಕಾರಣ ಏನೆಂದರೆ ತನ್ನ ವ್ಯಾಪಾರಕ್ಕೆ ಯಾವುದೇ ಹಾನಿ ಆಗದಿರಲಿ ಎಂಬುದಾಗಿದೆ ಎಂದು ದೂರಲಾಗಿದೆ.
ಫೇಸ್ಬುಕ್ ಭಾರತದ ಸಾರ್ವಜನಿಕ ನೀತಿ, ನಿರ್ದೇಶಕಿ ಅಂಕಿ ದಾಸ್ ಅವರು ಈ ವಿಚಾರವಾಗಿ ತಮ್ಮ ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಅಮೆರಿಕದ ‘ವಾಲ್ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಆರಂಭವಾಗಿದೆ.
ಭಾರತದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಆರೋಪ ಮಾಡಿದ್ದು ಅಮೇರಿಕದ ಪತ್ರಿಕೆಯೊಂದು ಪ್ರಕಟಿಸಿರುವ ಲೇಖನವನ್ನು ಆಧರಿಸಿ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಹುಲ್ ಹೇಳಿಕೆಗೆ ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿ, ತಮ್ಮ ಪಕ್ಷದವರ ಮೇಲೆಯೂ ಪ್ರಭಾವ ಬೀರಲು ಸಾಧ್ಯವಿಲ್ಲದವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್ಎಸ್ಎಸ್ ನಿಯಂತ್ರಿಸುತ್ತಿದೆ ಎಂದು ಬಡಬಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.