ರಾಮನಗರ, ಆ. 18 (DaijiworldNews/MB) : ತನ್ನದೇ ಆದ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡುತ್ತೇನೆ ಅದಕ್ಕಾಗಿ ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪದಲ್ಲಿ ದ್ವೀಪವೊಂದನ್ನು ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಈಗ ತನ್ನ ಈ ಹೊಸ ದೇಶಕ್ಕಾಗಿ ಇನ್ನು ನಾಲ್ಕು ದಿನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ನಿತ್ಯಾನಂದ ಸ್ವಾಮಿ ಈ ಕುರಿತಾಗಿ ತನ್ನ 2ನಿಮಿಷ 43 ಸೆಕೆಂಡುಗಳ ವಿಡಿಯೋದಲ್ಲಿ ಹೇಳಿಕೊಂಡಿದ್ದು, ತನ್ನ ಈ ಹೊಸ ಬ್ಯಾಂಕಿನ ಎಲ್ಲಾ ಮಾಹಿತಿಯನ್ನು ಹಾಗೂ ನೋಟ್ನ್ನು ಗಣೇಶ ಚತುರ್ಥಿ ದಿನ ಬಿಡುಗಡೆ ಮಾಡುವುದಾಗಿ ಎಂದು ಕೂಡಾ ಹೇಳಿಕೊಂಡಿದ್ದಾರೆ.
ಹಲವು ಅತ್ಯಾಚಾರ, ವಂಚನೆ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ಸ್ವಾಮಿ ಯುವಕರನ್ನು, ಮಕ್ಕಳನ್ನು ಬಂಧಿಸಿಟ್ಟ ಆರೋಪದ ಬಳಿಕ ಭಾರತದಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದು ಬಳಿಕ ಈಕ್ವೇಡಾರ್ನಲ್ಲಿ ತನ್ನದೇ ಆದ ದೇಶವನ್ನು ಸ್ಥಾಪಿಸಿಕೊಂಡಿದ್ದೇನೆ. ಅದಕ್ಕೆ ಕೈಲಾಸ ಎಂದು ಹೆಸರು ಇರಿಸಲಾಗಿದೆ ಎಂದು ಹೇಳಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಈಕ್ವೇಡಾರ್ ಸರ್ಕಾರ ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ತಿಳಿಸಿದ್ದರು.
ಇದೀಗ ನಿತ್ಯಾನಂದ ಸ್ವಾಮಿ ತನ್ನ ಕೈಲಾಸ ದೇಶದ ಆರ್ಥಿಕತೆ ನಿರ್ವಹಣೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಆರಂಭಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಇದು ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅದಕ್ಕಾಗಿ ಸುಮಾರು 300 ಪುಟದಷ್ಟು ದಾಖಲೆ ಸಿದ್ದ ಮಾಡಲಾಗಿದೆ. ದೇಶದ ಆರ್ಥಿಕ ನಿರ್ವಹಣೆ ಹಾಗೂ ದೇಣಿಗೆ ನಿರ್ವಹಣೆ ಇದರ ಉದ್ದೇಶ ಎಂದು ಹೇಳಿದ್ದಾರೆ.
ಇನ್ನು ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದನ ಕೈಲಾಸ ದೇಶದ ನೋಟು ಎಂಬ ಚಿತ್ರಗಳು ಭಾರೀ ವೈರಲ್ ಆಗಿದೆ. ಆದರೆ ಇದು ನಿತ್ಯಾನಂದ ಬಿಡುಗಡೆ ಮಾಡಲಿರುವ ನೋಟುಗಳೇ ಎಂಬುದು ತಿಳಿದು ಬಂದಿಲ್ಲ.