ಡೆಹ್ರಾಡೂನ್, ಆ 18 (DaijiworldNews/PY): ಮಹಿಳೆಯೊಬ್ಬರು ಉತ್ತರಾಖಂಡದ ದ್ವಾರಹಟ್ನ ಬಿಜೆಪಿ ಶಾಸಕ ಮಹೇಶ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ನೇಗಿಯವರೇ ನನ್ನ ಮಗುವಿನ ತಂದೆ, ಬೇಕಾದಲ್ಲಿ ಡಿಎನ್ಎ ಪರೀಕ್ಷೆ ಮಾಡಿಸಿ ಎಂದು ಸವಾಲೆಸೆದಿದ್ದಾರೆ.
2016 ಮತ್ತು 2018 ರ ನಡುವೆ ಶಾಸಕ ನೇಗಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ. ಅಲ್ಲದೇ, ಮಹಿಳೆಯ ವಿರುದ್ದ ಶಾಸಕ ನೇಗಿ ಪತ್ನಿ ಪ್ರತಿ ದೂರು ನೀಡಿದ್ದು, ಆಕೆ ತನ್ನ ಪತಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
ವಿವಾಹಿತ ಮಹಿಳೆ ಬಿಜೆಪಿಯ ದ್ವಾರಹಟ್ ಶಾಸಕ ಮಹೇಶ್ ನೇಗಿ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಹೊರಿಸಿದ್ದು, ನೆಹರು ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸತ್ಯವನ್ನು ಬಹಿರಂಗಪಡಿಸಲು ಡಿಎನ್ಎ ಪರೀಕ್ಷೆಯನ್ನು ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.
ಶಾಸಕರು ತಮ್ಮೊಂದಿಗೆ ಮುಸ್ಸೂರಿ, ನೈನಿತಾಲ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ಕರೆದೊಯ್ದಿದ್ದರು. ಅಲ್ಲದೇ, 2016 ಮತ್ತು 2018 ರ ನಡುವೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಮಹಿಳೆ ಶಾಸಕ ನೇಗಿಯ ನೆರೆಯವರಾಗಿದ್ದು, 2016 ರಲ್ಲಿ ತನ್ನ ತಾಯಿಯ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ನೆರವು ಕೋರಲು ಅವರನ್ನು ಭೇಟಿಯಾಗಿದ್ದೆ. ಆದರೆ, ಈ ವಿಚಾರವನ್ನು ಬಾಯಿಬಿಡದಂತೆ ಶಾಸಕ ನೇಗಿ ಪತ್ನಿ 25 ಲಕ್ಷ ಆಮಿಷ ಒಡ್ಡಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಡಿಜಿ ಅಶೋಕ್ ಕುಮಾರ್ ಹೇಳಿದ್ದಾರೆ.
ಏತನ್ಮಧ್ಯೆ, ಮಹಿಳೆ ತನ್ನ ಪತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕರ ಪತ್ನಿ ನೆಹರೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡೂ ಕಡೆಯವರ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.
ಶಾಸಕ ಮಹೇಶ್ ನೇಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಾಸಕ ವಿರುದ್ದ ಗಂಭೀರ ಆರೋಪ ಎದುರಾದ ಕಾರಣ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಪ್ರೀತಂ ಸಿಂಗ್ ತಿಳಿಸಿದ್ದಾರೆ.