ಬೆಂಗಳೂರು, ಆ 18 (DaijiworldNews/PY): ಬೆಂಗಳೂರು ಗಲಭೆಗೆ ಭಯೋತ್ಪಾದನೆ ಸಂಘಟನೆ ನಂಟು ಇದೆ ಎನ್ನಲಾಗಿದ್ದು, ತನಿಖೆಯನ್ನು ಎನ್ಎಐಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿಷೇಧಿತ ಅಲ್-ಹಿಂದ್ ಭಯೋತ್ಪಾದಕ ಸಂಘಟನೆ ಜೊತೆ ಸಂಬಂಧ ಹೊಂದಿದ್ದ ಎನ್ನಲಾದ ಆರೋಪಿ ಹಾಗೂ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಾದ ಸಮಿಯುದ್ದೀನ್ ಹಾಗೂ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜೀತ್ ಇವರು ಪಿಎಫ್ಐ ಹಾಗೂ ಎಸ್ಡಿಪಿಐನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಸಮಿಯುದ್ದೀನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಲ್-ಹಿಂದ್ ಭಯೋತ್ಪಾದನಾ ಸಂಘಟನೆಯನ್ನು ಎರಡು ವರ್ಷಗಳ ಹಿಂದೆ ಭಾರತದಲ್ಲಿ ಸ್ಥಾಪಿಸಲಾಗಿದ್ದು, ಈ ಸಂಘಟನೆಯ ಬಗ್ಗೆ ಎನ್ಐಎ ಅಧಿಕರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿನ್ನೆಲೆ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಸಂಪರ್ಕವಿದೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.