ನವದೆಹಲಿ, ಆ 18 (Daijiworld News/MSP): ಕೊರೊನಾ ವೈರಸ್ನಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ಮಂಗಳವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ.
ಉಸಿರಾಟದ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಮಂಗಳವಾರ ನಸುಕಿನ ಜಾವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎದೆಗೆ ಸಂಬಂಧಿಸಿದ ಸೋಂಕಿನ ಚಿಕಿತ್ಸೆಗೆ ಅವರಿಗೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ನೇತೃತ್ವದ ವೈದ್ಯರ ತಂಡ ಶಾಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಮಿತ್ ಶಾ ಅವರು ಕೊರೊನಾಗೆ ತುತ್ತಾಗಿ ಬಳಿಕ ಚೇತರಿಸಿಕೊಂಡಿದ್ದು, ಶುಕ್ರವಾರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ವಿಶ್ರಾಂತಿಗಾಗಿ ಕೆಲ ದಿನ ಕಾಲ ಮನೆಯಲ್ಲಿರುವುದಾಗಿ ಅವರು ಹೇಳಿದ್ದರು.
ಇದೀಗ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನೆಗೆಟಿವ್ ಬಂದ ಹಿನ್ನಲೆಯಲ್ಲಿ ಏಮ್ಸ್ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.