ನವದೆಹಲಿ, ಆ 18 (DaijiworldNews/PY): ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ಪಿಎಂ ಕೇರ್ಸ್ ಫಂಡ್ನ ಅಗತ್ಯವಿಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಪಿಎಂ ಕೇರ್ಸ್ಗೆ ನೀಡಿರುವ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಜನರು ತಮ್ಮ ಸ್ವಯಂ ಪ್ರೇರಣೆಯಿಂದ ಎನ್ಡಿಆರ್ಎಫ್ಗೆ ಹಣ ನೀಡಬಹುದು. ಇದಕ್ಕಾಗಿ ಹೊಸ ಯೋಜನೆಯ ಅಗತ್ಯವಿಲ್ಲ ಎಂದು ಸುಪ್ರೀಂ ಹೇಳಿದೆ.
ಪಿಎಂ ಕೇರ್ಸ್ನ ಹಣವನ್ನು ಎನ್ಡಿಆರ್ಎಫ್ ನಿಧಿಗೆ ಹಣವನ್ನು ವರ್ಗಾಯಿಸುವಂತೆ ಎನ್ಜಿಒವೊಂದು ಅರ್ಜಿ ಸಲ್ಲಿಸಿತ್ತು, ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಹಾಗೂ ಎಂ.ಆರ್ ಷಾ ಅವರ ನೇತೃತ್ವದ ಪೀಠ, ಎನ್ಡಿಆರ್ಎಫ್ಗೆ ಯಾರೇ ಆಗಲಿ ಹಣ ನೀಡುವುದಕ್ಕೆ ಯಾವುದೇ ಶಾಸನಬದ್ದ ಅಡಚಣೆ ಇಲ್ಲ. ಅಲ್ಲದೇ ಪಿಎಂ ಕೇರ್ಸ್ಗೂ ಕೂಡಾ ಹಣ ನೀಡಬಹುದು. ಆದರೆ, ಪಿಎಂ ಕೇರ್ಸ್ ಫಂಡ್ನಿಂದ ಎನ್ಡಿಆರ್ಎಫ್ಗೆ ಹಣವನ್ನು ವರ್ಗಾಯಿಸುವಂತಿಲ್ಲ ಎಂದು ತಿಳಿಸಿದ್ದು, ಅರ್ಜಿಯನ್ನು ತಿರಸ್ಕರಿಸಿದೆ.
ಮಾರ್ಚ್ 28 ರಂದು ಕೇಂದ್ರವು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿತ್ತು. ಪ್ರಸ್ತುತ ಕೊರೊನಾದಿಂದ ಎದುರಾಗುವ ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಪಿಎಂ ಕೇರ್ಸ್ ಹೊಂದಿದೆ.