ಬೆಂಗಳೂರು, ಆ. 18 (DaijiworldNews/MB) : ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ಪಿಎಂ ಕೇರ್ಸ್ ಫಂಡ್ನ ಅಗತ್ಯವಿಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇತ್ತೀಚೆಗೆ ಸಾಮಾಜಿಕ ಮಾಧ್ಯಮಕ್ಕೆ ರೀ ಎಂಟ್ರಿ ಕೊಟ್ಟಿರುವ ಸ್ಯಾಂಡಲ್ವುಡ್ ನಟಿ, ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮದ ಮಾಜಿ ನಿರ್ವಾಹಕಿ ಖಂಡಿತವಾಗಿಯೂ ದಾಲ್ ಮೆ ಕುಚ್ ಕಾಲಾ ಹೈ ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಮಾಜಿ ನಿರ್ವಾಹಕಿ ಇಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಡಿರುವ ಟ್ವೀಟ್ ಮತ್ತೆ ರಾಜಕೀಯಕ್ಕೆ ನಟಿ ರಮ್ಯಾ ಎಂಟ್ರಿ ಕೊಡ್ತಾರಾ ಎಂಬ ಅನುಮಾನ ಮೂಡಿಸಿದೆ.
ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಪಿಎಂ ಕೇರ್ಸ್ಗೆ ನೀಡಿರುವ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಜನರು ತಮ್ಮ ಸ್ವಯಂ ಪ್ರೇರಣೆಯಿಂದ ಎನ್ಡಿಆರ್ಎಫ್ಗೆ ಹಣ ನೀಡಬಹುದು. ಇದಕ್ಕಾಗಿ ಹೊಸ ಯೋಜನೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಗಲಿನ ಬೆಳಕಿನಂತೆ ಇದು ಸ್ಪಷ್ಟವಾಗಿದೆ. ಖಂಡಿತವಾಗಿಯೂ ದಾಲ್ ಮೆ ಕುಚ್ ಕಾಲಾ ಹೈ ಎಂದು ಹೇಳಿದ್ದು ಇವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಟಿ ರಮ್ಯಾ ಸಾಮಾಜಿಕ ಜಾಲತಾಣಕ್ಕೆ ಒಂದು ವರ್ಷದ ಬಳಿಕ ವಾಪಾಸ್ ಆದಾಗ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಹಲವು ಅಭಿಮಾನಿಗಳು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಿ ಎಂದು ಹೇಳಿದ್ದರು. ಇನ್ನು ಕಾಂಗ್ರೆಸ್ ಕಾರ್ಯಕರ್ತರು ರಮ್ಯಾ ಇನ್ಸ್ಟಾಗ್ರಾಂ ಪೋಸ್ಟ್ಗೆ ಕಾಮೆಂಟ್ ಮಾಡಿ ಮತ್ತೆ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿ ಎಂದು ಹೇಳಿದರೆ ಇನ್ನು ಹಲವು ಅಭಿಮಾನಿಗಳು ಮತ್ತೆ ರಾಜಕೀಯಕ್ಕೆ ಸೇರಿಕೊಳ್ಳಿ ಎಂದು ಹೇಳಿದ್ದರು.
ಇದೀಗ ರಮ್ಯಾ ಕೇಂದ್ರ ಪಿಎಂ ಕೇರ್ಸ್ ಫಂಡ್ ಬಗ್ಗೆ ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯಿಸಿರುವುದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಕ್ಕೆ ರೀ ಎಂಟ್ರಿ ಕೊಟ್ಟ ರಮ್ಯಾ ಮತ್ತೆ ರಾಜಕೀಯಕ್ಕೂ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ಮೂಡಿಸಿದೆ.