ವಿಜಯವಾಡ, ಆ. 18 (DaijiworldNews/MB) : ಹಣಕಾಸಿಕ ವಿವಾದದಿಂದಾಗಿ ಹಾಡು ಹಗಲಿನಲ್ಲಿಯೇ ಮಹಿಳೆ ಸೇರಿದಂತೆ ಮೂವರನ್ನು ಕಾರಿನೊಳಗೆ ಲಾಕ್ ಮಾಡಿ ಕಾರಿಗೆ ಬೆಂಕಿ ಹಚ್ಚಿದ ಘಟನೆ ಆಂಧ್ರಪ್ರದೇಶದ ವಿಜಯವಾಡದ ಪಟಮಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವಿಜಯವಾಡ ಪೊಲೀಸ್ ಉಪ ಆಯುಕ್ತ ( ಡಿಸಿಪಿ) ವಿ ಹರ್ಷವರ್ಧನ್ ರಾಜು ಅವರು, ''ವೇಣುಗೋಪಾಲ್ ರೆಡ್ಡಿ ಎಂಬವರು ಕೆಲ ದಿನಗಳ ಹಿಂದೆ ಗಂಗಾಧರ್ ಎಂಬವರೊಂದಿಗೆ ವ್ಯವಹಾರ ಒಂದರಲ್ಲಿ ಪಾಲುದಾರರಾಗಿದ್ದರು. ಸೆಂಕೆಡ್ ಹ್ಯಾಂಡ್ ಕಾರುಗಳನ್ನು ಖರೀದಿ ಮಾಡಿ ಅವರು ಮಾರಾಟ ಮಾಡುತ್ತಿದ್ದರು. ಆದರೆ ಅವರ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಬಳಿಕ ವೇಣುಗೋಪಾಲ್ ಹಾಗೂ ಗಂಗಾಧರ್ ಅವರು ಬೇರೆಯಾಗಿದ್ದರು. ಗಂಗಾಧರ್, ಅವರ ಪತ್ನಿ ಹಾಗೂ ಸ್ನೇಹಿತ ಕೃಷ್ಣ ರೆಡ್ಡಿ ಸೋಮವಾರ ವೇಣುಗೋಪಾಲ್ನ್ನು ಭೇಟಿಯಾಗಿದ್ದು ಈ ಸಂದರ್ಭದಲ್ಲಿ ಕಾರಿನಿಂದ ಸಿಗರೇಟ್ ಸೇದಲೆಂದು ಕೆಳಗೆ ಇಳಿದ ವೇಣುಗೋಪಾಲ್ ಕಾರನ್ನು ಲಾಕ್ ಮಾಡಿ ವಿಸ್ಕಿ ಬಾಟಲ್ನಲ್ಲಿ ತಂದಿದ್ದ ಪೆಟ್ರೋಲ್ನ್ನು ಕಾರಿಗೆ ಸುರಿದು ಬೆಂಕಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ'' ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಕಾರಿನೊಳಗೆ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂವರೂ ಗಾಯಗೊಂಡಿದ್ದು ಈ ಪೈಕಿ ಸ್ನೇಹಿತ ಕೃಷ್ಣ ರೆಡ್ಡಿ ಅವರಿಗೆ ಗಂಭೀರವಾದ ಗಾಯವಾಗಿದೆ ಎಂದು ವರದಿ ತಿಳಿಸಿದೆ.
ಹಾಗೆಯೇ ಆರೋಪಿ ವೇಣುಗೋಪಾಲ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.