ಬೆಂಗಳೂರು, ಆ 18 (DaijiworldNews/PY): ಬಿಜೆಪಿ ಕಚೇರಿಯಲ್ಲಿ ರೋಶನ್ ಬೇಗ್ ಕಸಗುಡಿಸಿದರೆ 2023ರಲ್ಲಿ ಚುನಾವಣಾ ಟಿಕೆಟ್ ಸಿಗಬಹುದು ಎಂದು ಹೇಳಿರುವ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿರುವ ರೋಶನ್ ಬೇಗ್, ಶಾಸಕ ಜಮೀರ್ ಅಹಮದ್ ಯಡಿಯೂರಪ್ಪ ಅವರ ಮನೆ ಮುಂದೆ ವಾಚ್ಮ್ಯಾನ್ ಆಗಲಿ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಯಾವುದೇ ಎಸ್ಡಿಪಿಐಗೆ ನಾನು ಬೆಂಬಲ ನೀಡಿಲ್ಲ. ಬೇರೆಯವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮೊದಲು ಶಾಸಕ ಜಮೀರ್ ಅಹಮದ್ ಬಿ.ಎಸ್.ಯಡಿಯೂರಪ್ಪ ಅವರ ಮನೆ ವಾಚ್ಮ್ಯಾನ್ ಆಗಲಿ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಗಲಭೆಯಲ್ಲಿ ಕೆಲ ಅಮಾಯಕ ಮಂದಿಯೂ ಇರಬಹುದು. ಅಮಾಯಕರನ್ನು ಬಿಡಿ ಎಂದು ಖುದ್ದಾಗಿ ನಾನೇ ತಿಳಿಸಿದ್ದೆ. ಈ ಗಲಭೆಯಲ್ಲಿ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದರು.
ಇಂತಹ ಗಲಭೆ ಪ್ರಾರಂಭ ಮಾಡಲು ಗೋರಿ ಪಾಳ್ಯದಿಂದ ಮೌಲಾನಾಗಳು ಯಾಕಾಗಿ ಬರಬೇಕಿತ್ತು? ಇಲ್ಲಿ ಗಲಾಟೆ ನಡೆಸಲು ಟಿಪ್ಪು ನಗರದಿಂದ ಜನ ಬರಬೇಕಿತ್ತಾ ಎಂದು ಕೇಳಿದರು.
ರಮೇಶ್ ಕುಮಾರ್ ಸೇರಿದಂತೆ ಸುದರ್ಶನ್ ಹಾಗೂ ಮಹದೇವಪ್ಪ ಅವರು ಹಿಂದೆ ನಡೆದ ಗಲಾಟೆಯೊಂದರಲ್ಲಿ ನನ್ನ ಪ್ರಾಣ ಕಾಪಾಡಿದ್ದರು ಎಂದರು.