ಬೆಂಗಳೂರು, ಆ. 18 (DaijiworldNews/MB) : ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಿರುವ ಅಲ್ ಹಿಂದ್ ಸಂಘಟನೆ ಸದಸ್ಯ, ಶಂಕಿತ ಉಗ್ರ ಸಮಿಯುದ್ದೀನ್ನನ್ನು ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ) ವಿಭಾಗದ ಅಧಿಕಾರಿಗಳು ಈಗ ಆತನನ್ನು ಗೌಪ್ಯ ಸ್ಥಳವೊಂದರಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರು ಗಲಭೆಯಲ್ಲಿ ಭಾಗಿಯಾದ ಶಂಕೆಯಲ್ಲಿ ಬಂಧಿಸಲಾಗಿರುವ ಡಿಜೆ ಹಳ್ಳಿ ನಿವಾಸಿ ಸಮಿಯುದ್ದೀನ್ನ ವಿಚಾರಣೆ ನಡೆಸಿದಾಗ ಉಗ್ರ ಸಂಘಟನೆಯ ಬಗ್ಗೆ ಮಾಹಿತಿ ದೊರೆತಿದ್ದು ಇದೀಗ ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ)ದ ಎಸಿಪಿ ವೇಣುಗೋಪಾಲ್ ಅವರ ನೇತೃತ್ವದ ತಂಡ ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದೆ.
2016ರಲ್ಲಿ ಬೆಂಗಳೂರಿನಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿದ್ದಾನೆ ಎಂದು ಶಂಕಿಸಲಾಗಿರುವ ಈತನ ಮಾರ್ಗದರ್ಶನದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಗಲಭೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದರಲ್ಲಿ ಕೈಸನ್ನೆ ಮಾಡಿ ಬೆಂಕಿ ಹಚ್ಚಲು ಹೇಳುವುದು ಕಂಡು ಬಂದಿದೆ. ಹಾಗೆಯೇ ಗಲಭೆಗೂ ಮುನ್ನ ನೂರಾರು ವಾಟ್ಸ್ಆಪ್ ಮಸೇಜ್ ಹಾಗೂ ಕರೆಗಳನ್ನು ಮಾಡಿರುವುದು ವಿಚಾರಣೆ ಸಂದರ್ಭ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಇನ್ನು ಶಂಕಿತ ಉಗ್ರನಾದ ಈತ ಯಾರೆಲ್ಲಾ ಸಂಪರ್ಕದಲ್ಲಿ ಇದ್ದಾನೆ ಎಂಬ ಬಗ್ಗೆ ಎಟಿಸಿ ವಿಚಾರಣೆ ನಡೆಸುತ್ತಿದೆ.