ಬೆಂಗಳೂರು, ಆ 18 (DaijiworldNews/PY): ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಕಾರಣ ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ನೇತ್ರ ವೈದ್ಯನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಆರೋಪಿಯನ್ನು ಅಬ್ದುಲ್ ರೆಹಮಾನ್ (28) ಎಂದು ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ದಳದ ಮಾಹಿತಿ ಪ್ರಕಾರ, ಬೆಂಗಳೂರಿನ ಬಸವನಗುಡಿ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ (ಐಎಸ್ಪಿಕೆ) ಹಾಗೂ ಸಿರಿಯಾದ ಇತರ ಐಸಿಸ್ ಕಾರ್ಯತರಿಗೆ ಸಂಬಂಧಿಸಿದಂತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಈ ಬಗ್ಗೆ ವಿಚಾರಣೆಯ ಸಂದರ್ಭ ಆತ ತಪ್ಪೊಪ್ಪಿಕೊಂಡಿದ್ದಾನೆ. ಗಲಭೆಯ ಪ್ರದೇಶಗಳಲ್ಲಿ ಐಸಿಸ್ ಕಾರ್ಯಕರ್ತರಿಗೆ ಸಹಾಯ ಮಾಡಲು ಅಬ್ದುರ್ ರೆಹಮಾನ್ ವೈದ್ಯಕೀಯ ಅಪ್ಲಿಕೇಶನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಮತ್ತೊಂದು ಅಪ್ಲಿಕೇಶನ್ ಅನ್ನು ಅಭಿವೃದ್ದಿ ಪಡಿಸುತ್ತಿದ್ದಾನೆ ಎಂದು ಎನ್ಐಎ ಹೇಳಿದೆ.
ಅಬ್ದುಲ್ ರೆಹಮಾನ್ ಬಾಂಗ್ಲಾ ಮೂಲದ ನಿಷೇಧಿತ ಉಗ್ರ ಸಂಘಟನೆಯೊಂದರ ಸದಸ್ಯನೂ ಆಗಿದ್ದ. ಈತ ತಿಹಾರ್ ಜೈಲಿನಲ್ಲಿದ್ದ ಅಬ್ದುಲ್ ಬಸೀತ್ ಎಂಬಾತನೊಂದಿಗೆ ಹೊಂದಿದ್ದ. ಅಲ್ಲದೇ, ಸಿಎಎ ಗಲಭೆಗೆ ಸಂಚು ನಡೆಸಿದ್ದ ಎನ್ನಲಾಗಿದೆ.
ಈತ 2014 ರಲ್ಲಿ ಸಿರಿಯಾದ ಐಸಿಸ್ ವೈದ್ಯಕೀಯ ಶಿಬಿರಕ್ಕೆ ಭೇಟಿ ನೀಡಿದ್ದು ಹಾಗೂ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರೊಂದಿಗೆ 10 ದಿನಗಳ ಕಾಲ ಇದ್ದು ಭಾರತಕ್ಕೆ ಮರಳಿದ್ದಾನೆ ಎಂದು ತಿಳಿದುಬಂದಿದೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.