ಬೆಂಗಳೂರು, ಆ. 19 (DaijiworldNews/MB) : ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಾಮರ ನಡೆಯುತ್ತಲೇ ಇದೆ. ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು, ''ಕಾಂಗ್ರೆಸ್, ಕಾರ್ಪೋರೇಟರ್ಗಳ ಕುಮ್ಮಕ್ಕಿನಿಂದ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮನೆ ಸುಟ್ಟು ಪಾಪದ ಕೆಲಸ ಮಾಡಿದೆ'' ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಎಪಿಜೆ ಅಬ್ದುಲ್ ಕಲಾಂ, ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನ ಕೊಟ್ಟು ಬಿಜೆಪಿ ಗೌರವಿಸಿತು'' ಎಂದು ಹೇಳಿದ್ದು ''ಕಾಂಗ್ರೆಸ್, ಕಾರ್ಪೊರೇಟರ್ಗಳ ಕುಮ್ಮಕ್ಕಿನಿಂದ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮನೆ ಸುಟ್ಟು ಪಾಪದ ಕೆಲಸ ಮಾಡಿತು. ಯಾವುದು ಸ್ವಾರ್ಥವೋ ಅದೇ ಪಾಪ. ಯಾವುದು ನಿಸ್ವಾರ್ಥವೋ ಅದೇ ಪುಣ್ಯ. ಸೇವಾ ಕಾರ್ಯದಲ್ಲಿ ಪ್ರೀತಿ ಇರಬೇಕು, ದ್ವೇಷವಲ್ಲ'' ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಂಗಳವಾರ ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದು, ''ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್ಗಳು ಇರುವಾಗ ಕಾವಲಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ'' ಎಂದು ಹೇಳಿದ್ದರು.