ಚಾಮರಾಜನಗರ, ಆ. 19 (DaijiworldNews/HR): ಬಿಜೆಪಿ ಮುಖಂಡ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ. ಗುರುಸ್ವಾಮಿ (68) ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಹಿರಿಯ ರಾಜಕೀಯ ನಾಯಕ. ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ ಅವರು ಜನತಾದಳದಲ್ಲಿ ಅವಿಭಜಿತ ಮೈಸೂರು ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಕೇಂದ್ರದ ಮಾಜಿ ಸಚಿವ ರಾಜಶೇಖರಮೂರ್ತಿಯವರ ಶಿಷ್ಯರಾಗಿದ್ದ ಅವರು ರಾಜಶೇಖರಮೂರ್ತಿಯವರು ಬಿಜೆಪಿ ಸೇರಿದ ಸಂದರ್ಭದಲ್ಲಿ ಗುರುಸ್ವಾಮಿ ಕೂಡ ಬಿಜೆಪಿ ಸೇರಿದರು.
1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಬಳಿಕ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಗುರುಸ್ವಾಮಿಯವರು ಸೋಲಿಸಿದ್ದು ಆಗ ದಾಖಲೆಯಾಗಿತ್ತು. ಆ ಕ್ಷೇತ್ರದ ಮೊದಲ ಬಿಜೆಪಿ ಶಾಸಕರೆಂಬ ಹೆಗ್ಗಳಿಕೆಯೂ ಅವರದೇ ಆಗಿತ್ತು.
ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲೂಕಿನ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರ ದಂತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.