ನವದೆಹಲಿ, ಆ. 19 (DaijiworldNews/MB) : ಐಸಿಎಂಆರ್ ಹಾಗೂ ಬೆಂಗಳೂರು ಮೂಲದ ನ್ಯಾಷನಲ್ ಸೆಂಟರ್ ಫಾರ್ ಡೀಸಿಸ್ ಇನ್ ಫಾರ್ಮಟಿಕ್ಸ್ ಆ್ಯಂಡ್ ರಿಸರ್ಚ್ 2020ರ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ವರದಿಯನ್ನು ಬಿಡುಗಡೆ ಮಾಡಿದ್ದು ಪ್ರಸ್ತುತ ಭಾರತದಲ್ಲಿ 13.9 ಲಕ್ಷ ಮಂದಿ ಕ್ಯಾನ್ಸರ್ ರೋಗಿಗಳಿದ್ದು, 2025ನೇ ಇಸವಿಗೆ 15.7ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇನ್ನು ಇದರಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಶೇ.27.1ರಷ್ಟಿದ್ದು, 2020ರ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಇದು 3.7 ಲಕ್ಷದಷ್ಟಿದೆ. ಈ ಮಾಹಿತಿಯನ್ನು 28 ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಯಿಂದ ಪಡೆಯಲಾಗಿದ್ದು ಹೆಚ್ಚುವರಿಯಾಗಿ 58 ಆಸ್ಪತ್ರೆಗಳ ಕ್ಯಾನ್ಸರ್ ದಾಖಲಾತಿಯಿಂದ ಮಾಹಿತಿ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಶ್ವಾಸಕೋಶ, ಹೊಟ್ಟೆ, ಗಂಟಲನಾಳ ಕ್ಯಾನ್ಸರ್ ಪುರುಷರಲ್ಲಿ ಕಂಡು ಬಂದಿರುವ ಸಾಮಾನ್ಯ ಕ್ಯಾನ್ಸರ್ ಆಗಿದ್ದು ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿದೆ. 2ಲಕ್ಷ (ಶೇ.14.8) ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. 0.75ಲಕ್ಷ (ಶೇ.5.4ರಷ್ಟು) ದಷ್ಟು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಕಾಣಿಸಿಕೊಂಡಿದೆ.
ಇನ್ನು ಜಠರ ಕ್ಯಾನ್ಸರ್ 2.7 ಲಕ್ಷ (ಶೇ.19.7ರಷ್ಟು)ದಷ್ಟು ಇದ್ದು ಇದು ಮಹಿಳೆ ಮತ್ತು ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿದೆ. ಹಾಗೆಯೇ ತಲೆ ಮತ್ತು ಕುತ್ತಿಗೆ, ಹೊಟ್ಟೆ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಐಸಿಎಂಆರ್ನ ವರದಿ ತಿಳಿಸಿದೆ.