ನವದೆಹಲಿ, ಆ. 19 (DaijiworldNews/MB) : ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ.
ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಿಬಿಐಗೆ ವರ್ಗಾವಣೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಪಾಟ್ನಾದಲ್ಲಿ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಸರಿಯಾಗಿದೆ. ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವುದು ಸರಿಯಾಗಿದೆ ಎಂದು ಕೋರ್ಟ್ ಹೇಳಿದೆ.
ಇನ್ನು ಸುಪ್ರೀಂ ಕೋರ್ಟ್ನ ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಶಾಂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್, ಇದು ಐತಿಹಾಸಿಕ ತೀರ್ಪು ಎಂದು ಹೇಳಿದ್ದಾರೆ.
ರಿಯಾ ಚರ್ಕವರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಗುರುವಾರ ಲಿಖಿತ ಹೇಳಿಕೆ ದಾಖಲಿಸಿದೆ ಹಾಗೂ ರಿಯಾ ಸಹ ಹೇಳಿಕೆ ದಾಖಲಿಸಿದ್ದರು. ಬಿಹಾರ ಸರ್ಕಾರವು ರಿಯಾ ಅರ್ಜಿ ವಜಾಗೊಳಿಸಲು ಮನವಿ ಮಾಡಿತ್ತು.
ಇನ್ನು ಸರ್ಕಾರದ ವಕೀಲ ಕೇಶವ ಮೋಹನ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಗೆ ತನಿಖೆ ನಡೆಸುವ ಅವಕಾಶವಿದೆ ಎಂದು ಕೋರ್ಟ್ಗೆ ಹೇಳಿದ್ದರು.
ಜೂನ್ 14 ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ನಟ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್, ರಿಯಾ ಚಕ್ರವರ್ತಿ ಹಾಗೂ ಪಾಟ್ನಾದಲ್ಲಿರುವ ರಿಯಾನ ಸಹೋದರ ಶೋಯಿಕ್ ಚಕ್ರವರ್ತಿ ಸೇರಿದಂತೆ ಅವರ ಕುಟುಂಬದ 5 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.