ಬೆಂಗಳೂರು, ಆ. 19 (DaijiworldNews/MB) : ಇತ್ತ ರಾಜ್ಯವು ಅತಿವೃಷ್ಟಿಯಿಂದ ತತ್ತರಿಸಿಹೋಗಿರುವಾಗ ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರ ಮುಂದುವರೆದಿದ್ದು ಸರ್ಕಾರದ ವಿರುದ್ದ ಮತ್ತೆ ಚಾಟಿ ಬೀಸಿರುವ ಸಿದ್ದರಾಮಯ್ಯ ಅವರು, ''ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ. ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ. ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ. ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ'' ಎಂದು ಹೇಳಿದ್ದಾರೆ.
''ಗೃಹಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ, ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ?'' ಎಂದು ಪ್ರಶ್ನಿಸಿರುವ ಅವರು, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ, ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ'' ಎಂದು ಹೇಳಿದ್ದಾರೆ.
ಹಾಗೆಯೇ ತನ್ನ ಕ್ಷೇತ್ರವಾದ ಬಾದಾಮಿಯ ಜನರಲ್ಲಿ ಕ್ಷಮೆ ಕೋರಿರುವ ಅವರು, ''ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ ಪಕ್ಷದ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ'' ಎಂದು ತಿಳಿಸಿದ್ದಾರೆ.