ನವದೆಹಲಿ, ಆ 19 (Daijiworld News/MSP): ಕಾಂಗ್ರೆಸ್ ಉತ್ತರಾಧಿಕಾರಿ ಸ್ಥಾನಕ್ಕೆ ಯಾರ ಆಯ್ಕೆ ಎನ್ನುವ ಚರ್ಚೆ ಮತ್ತೆ 'ಕೈ' ವಲಯದಲ್ಲಿ ಮುನ್ನಲೆಗೆ ಬಂದಿದ್ದು, ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ಪ್ರಿಯಾಂಕ ಗಾಂಧಿಯೂ ಸಹಮತ ವ್ಯಕ್ತಪಡಿಸಿದ್ದಾರೆ.
"ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಮ್ಮ ನಾಯಕ ಎಂದು ಒಪ್ಪಿಕೊಂಡು ಸ್ವೀಕರಿಸಲು ಸಿದ್ಧಳಿದ್ದೇನೆ. ಅಲ್ಲದೆ ಈಗಾಗಲೇ ನಮ್ಮ ಕುಟುಂಬದ ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ.
ಕಾಂಗ್ರೆಸ್ ಪಕ್ಷ ಇನ್ನು ಮುಂದೆ ತನ್ನದೇ ದಾರಿಯಲ್ಲಿ ಸಾಗಬೇಕಾಗಿದೆ. ಹೀಗಾಗಿ ನಮ್ಮ ಕುಟುಂಬದವರನ್ನು ಹೊರತುಪಡಿಸಿದ ನಾಯಕನ ಆಯ್ಕೆ ಮಾಡಬೇಕಾಗಿದೆ. ಒಂದು ವೇಳೆ ಅಧ್ಯಕ್ಷರಾದವರು ನನಗೆ 'ನೀನು ಉತ್ತರ ಪ್ರದೇಶದ ಜವಾಬ್ದಾರಿಯನ್ನು ಬಿಟ್ಟು ಅಂಡಮಾನ್ ನಿಕೋಬಾರ್ಗೆ ಹೋಗು' ಎಂದು ಹೇಳಿದರೂ ನಾನು ಅದನ್ನು ಸ್ವೀಕರಿಸಲು ಸಿದ್ಧಳಿದ್ದೇನೆ. ಎಐಸಿಸಿ ಅಧ್ಯಕ್ಷ ಯಾರೇ ಆದರೂ ಅವರ ಆದೇಶವನ್ನು ನಾನು ಖಂಡಿತ ಪಾಲಿಸುತ್ತೇನೆ "ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ ಬಳಿಕ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತ್ತು.