ಬೆಂಗಳೂರು, ಆ 19 (DaijiworldNews/HR): ಆಗಸ್ಟ್ 11ರಂದು ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ದುಷ್ಕರ್ಮಿಗಳ ಭೇಟೆ ಮುಂದುವರಿಸಿದ್ದ ಪೊಲೀಸರು ಇಂದು ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದ, ಜೆಡಿಎಸ್ ಮುಖಂಡ ಹಾಗೂ ಪ್ರಕರಣದ ಪ್ರಮುಖ ರೂವಾರಿ ವಾಜಿದ್ನ ಬಲಗೈ ಬಂಟರು ಹಾಗೂ ಈ ಪ್ರಕರಣದ ಆರೋಪಿಗಳೆನ್ನಲಾದ ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಎಂಬುವರನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್ ಮುಖಂಡ ವಾಜಿದ್ ವಿಚಾರಣೆ ವೇಳೆ ನೀಡಿದ ಸುಳಿವಿನ ಮೇರೆಗೆ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ಈ ನಾಲ್ವರನ್ನು ಇಂದು ಮುಂಜಾನೆ ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ವಾಜಿದ್ 10 ಆರೋಪಿಗಳ ಹೆಸರನ್ನು ಹೇಳಿದ್ದಾರೆ ಅದರಲ್ಲಿ ಸದ್ಯ ಬೆಂಗಳೂರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ 6 ಮಂದಿ ಆರೋಪಿಗಳು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸಬಹುದೆಂದು ಪರಾರಿಯಾಗಿದ್ದಾರೆ.
ಈಗಾಗಲೇ ಸಿಸಿಬಿಯ ಮೂರು ತಂಡ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತೆರಳಿದೆ ಎಂದು ಗೃಹ ಇಲಾಖೆಯ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.