ನವದೆಹಲಿ, ಆ 19 (Daijiworld News/MSP): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಲ್ಲಿ ಶ್ವಾಸಕೋಶದ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಬುಧವಾರ ಸೇನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಣವ್ ಅವರು ದೆಹಲಿಯ 'ಆರ್ಮಿ ರಿಸರ್ಚ್ ಆಯಂಡ್ ರೆಫೆರಲ್' ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು, ಪ್ರಣಬ್ ಮುಖರ್ಜಿಯವರು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸುತ್ತಿದೆ. ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ . ನುರಿತ ವೈದ್ಯರ ತಂಡ ಪ್ರಣಬ್ ಮುಖರ್ಜಿ ಅವರ ಚಿಕಿತ್ಸೆ ಮೇಲ್ವಿಚಾರಣೆಯನ್ನು ನಿರಂತರವಾಗಿ ನಡೆಸುತ್ತಿದೆ ಎಂದು ವಿವರಿಸಿದ್ದಾರೆ.
ಇದಕ್ಕೂ ಮುನ್ನ ,ಅವರ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಣವ್ ಪುತ್ರ ಅಭಿಜಿತ್ ಮುಖರ್ಜಿ ಅವರು, ನಿಮ್ಮೆಲ್ಲರ ಹಾರೈಕೆ ಹಾಗೂ ಪ್ರಾರ್ಥನೆ, ವೈದ್ಯರ ಪ್ರಾಮಾಣಿಕ ಪರಿಶ್ರಮದಿಂದ ತಂದೆಯ ಆರೋಗ್ಯದಲ್ಲಿ ಚೇತರಿಕೆ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ನನ್ನ ತಂದೆ ಆರೋಗ್ಯ ಸ್ಥಿರವಾಗಿದೆ" ಎಂದಿದ್ದರು.
84 ವರ್ಷದ ಮುಖರ್ಜಿ ಅವರು ಈ ತಿಂಗಳ 10ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಯಲಾಗಿತ್ತು. ಶಸ್ತ್ರ ಚಿಕಿತ್ಸೆಗೂ ಮುನ್ನ ಪ್ರಣವ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದೂ ದೃಢಪಟ್ಟಿತ್ತು.