ನವದೆಹಲಿ, ಆ 19 (Daijiworld News/MSP): ರೇಲ್ವೇ ಇಲಾಖೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಮುಂತಾದ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು "ರಾಷ್ಟ್ರೀಯ ನೇಮಕಾತಿ ಸಂಸ್ಥೆ"ಯೊಂದನ್ನು ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಈ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು 'ರಾಷ್ಟ್ರೀಯ ನೇಮಕಾತಿ ಸಂಸ್ಥೆ' ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಉದ್ಯೋಗ ಬಯಸುವ ಯುವಕರಿಗೆ ಸಹಕಾರಿಯಾಗಲಿದೆ .
ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸುವ ಫಲಿತಾಂಶಕ್ಕೆ ಮೂರು ವರ್ಷಗಳ ಕಾಲ ಮಾನ್ಯತೆ ಇರಲಿದೆ. ಇದೇ ಅವಧಿಯಲ್ಲಿ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆಯುವ ಅವಕಾಶವನ್ನೂ ಸಹ ಕಲ್ಪಿಸಲಾಗಿದೆ. ನೂತನ ಸಂಸ್ಥೆಯ ಕೆಳಗೆ ನಡೆಸಲಾಗುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ 12 ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಸಹ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ಯನ್ನು ಮೊದಲು ಸರ್ಕಾರವು 2020 ರ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಿತ್ತು. ಈ ಸಂಸ್ಥೆ ಸ್ವತಂತ್ರ, ವೃತ್ತಿಪರ, ತಜ್ಞ ಸಂಸ್ಥೆಯಾಗಲಿದ್ದು, ಸರ್ಕಾರಕ್ಕೆ ಆಯ್ಕೆ ಮಾಡಲು ಸಾಮಾನ್ಯ ಅರ್ಹತಾ ಪರೀಕ್ಷೆ ಎಂದು ಕರೆಯಲ್ಪಡುವ ಪರೀಕ್ಷೆಯನ್ನು ನಡೆಸಲಿದೆ.