ಬರೇಲಿ, ಆ 20 (DaijiworldNews/HR): 16 ವರ್ಷದ ಬಾಲಕಿಯೊಬ್ಬಳು ಪ್ರಧಾನ ಮಂತ್ರಿಗೆ 18 ಪುಟಗಳ ಡೆತ್ ನೋಟ್ ಬರೆದು ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸಂಭಾಲ್ನ ಬಾಬ್ರಲಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 16ರ ಬಾಲಕಿ, ಆಗಸ್ಟ್ 14 ರಂದು ರಾತ್ರಿ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುನ್ನೌರ್ನ ಠಾಣೆಯ ಪೊಲೀಸ್ ಅಧಿಕಾರಿ ದೇವೇಂದ್ರ ಕುಮಾರ್ ತಿಳಿಸಿದ್ದಾರೆ.
ಅರಣ್ಯ ನಾಶ, ಪರಿಸರ ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ದುಷ್ಕೃತ್ಯಗಳ ಏರಿಕೆಯಿಂದಾಗಿ ಉದ್ವಿಗ್ನಗೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ 18 ಪುಟಗಳ ಡೆತ್ ನೋಟ್ ಬರೆದು ಬಳಿಕ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಇದೇ ಡೆತ್ ನೋಟ್ ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಬಲವಾದ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ.
ಪತ್ರದಲ್ಲಿ "ಮಾಲಿನ್ಯ, ಭ್ರಷ್ಟಾಚಾರ ಮತ್ತು ಅರಣ್ಯನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹೆಚ್ಚುತ್ತಿರುವ ಸಾಮಾಜಿಕ ದುಷ್ಕೃತ್ಯಗಳಿಂದಾಗಿ ತಾನು ತೊಂದರೆಗೀಡಾಗಿದ್ದೇನೆ ಹಾಗಾಗಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಪಿಎಂ ಮೋದಿ ಅವರೊಂದಿಗೆ ಚರ್ಚಿಸಲು ಬಯಸುತ್ತೇನೆ" ಎಂದು ಉಲ್ಲೇಖಿದ್ದಾಳೆ.
ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಗ್ರಹಿಸಲು ಮತ್ತು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಬೇಕು. ದೇಶದ ವೃದ್ಧರಿಗೆ ನೀಡಲಾಗುವ ಚಿಕಿತ್ಸೆಯ ಬಗ್ಗೆ ಗಮನಹರಿಸಬೇಕು ಮತ್ತು ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಸ್ಥಳದಲ್ಲಿ ನಾನು ಇನ್ನು ಮುಂದೆ ವಾಸಿಸಲು ಬಯಸುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾಳೆ.
ಆಕೆಯ ಆತ್ಮಹತ್ಯೆಗೆ ಬಳಸಿರುವ ರಿವಾಲ್ವರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.