ಬೆಂಗಳೂರು, ಆ. 20(DaijiworldNews/HR): ರಾಜ್ಯ ಸರ್ಕಾರ ರೈತರಿಗೆ ಬೇಕಾದ ರಸಗೊಬ್ಬರ, ಯೂರಿಯಾವನ್ನು ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ಬಿಜೆಪಿ ಸರ್ಕಾರ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಉಂಟಾಗಿ ರೈತರು ಕಷ್ಟಪಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ರೈತರು ಗೊಬ್ಬರ ಸಿಗದೆ ನಿಮಗೆ ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ವರ್ಷ ರಾಜ್ಯದಾದ್ಯಂತ 25 ಶೇಕಡ ದಷ್ಟು ಬಿತ್ತನೆ ಮಾತ್ರ ಆಗಿದೆ. ಇದನ್ನು ಕೃಷಿ ಇಲಾಖೆ ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ರೈತರ ರಸಗೊಬ್ಬರ ಪೂರೈಕೆಗೆ ರಾಜ್ಯ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ರಾಜ್ಯ ಸರ್ಕಾರ ಸೂಕ್ತ ತುರ್ತು ವ್ಯವಸ್ಥೆ ಮಾಡುವಂತೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.