ಆಗ್ರಾ, ಆ 20 (DaijiworldNews/PY): ವೈದ್ಯಾಧಿಕಾರಿಯೋರ್ವ ಆಗ್ರಾ ಮೂಲದ ವೈದ್ಯೆಯೊಬ್ಬರನ್ನು ಕತ್ತು ಹಿಸುಕಿ ಹತ್ಯೆಗೈದ ಘಟನೆ ನಡೆದಿದೆ.
ಮೃತ ವೈದ್ಯೆ ಎಸ್.ಎನ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ವಿಭಾಗದಲ್ಲಿ ವೈದ್ಯೆ ಎನ್ನಲಾಗಿದ್ದು, ಆರೋಪಿಯನ್ನು ಡಾ.ವಿವೇಕ್ ತಿವಾರಿ ಎನ್ನಲಾಗಿದೆ.
ವೈದ್ಯೆ ಕಾಣೆಯಾಗಿರುವ ಬಗ್ಗೆ ಆಕೆಯ ಕುಟುಂಬದ ಸದಸ್ಯರು ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಕೊಲೆ ಬೆದರಿಕೆ ದೂರು ದಾಖಲಿಸಿದ್ದರು. ಆದರೆ, ವೈದ್ಯೆ ನಾಪತ್ತೆಯಾಗಿರುವ ಕೆಲವೇ ಸಮಯದ ನಂರ ಆಖೆಯ ಮೃತದೇಹ ನಗರದ ಬಮ್ರೌಲಿ ಕತಾರಾ ಪ್ರದೇಶದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದೆ.
ವೈದ್ಯೆಗೆ ಒರೈ ಜಲಾನ್ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಯೋರ್ವ ಕಿರುಕುಳ ನೀಡುತ್ತಿದ್ದು, ಅಲ್ಲದೇ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ಪೋಷಕರು ಹಾಗೂ ಸಹೋದರ ಆರೋಪಿಸಿದ್ದಾರೆ.
ದೂರಿನ ಅನ್ವಯ, ವೈದ್ಯಾಧಿಕಾರಿ ಡಾ.ವಿವೇಕ್ ತಿವಾರಿಯನ್ನು ಆಗ್ರಾ ಪೊಲೀಸರು ಬಂಧಿಸಿದ್ದು, ವಿಚಾರಣೆಯ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆ. ಆತನ ಪ್ರೇಮ ವೈಫಲ್ಯದ ಕಾರಣ ಆಕೆಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯು ವೈದ್ಯೆಯ ಕತ್ತು ಹಿಸುಕಿದ್ದಾನೆ. ಮೃತ ವೈದ್ಯೆಯ ತಲೆ ಹಾಗೂ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿವೆ ಎಂದು ಆಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಬ್ಲು ಕುಮಾರ್ ತಿಳಿಸಿದ್ದಾರೆ.