ಒಡಿಸ್ಸಾ, ಆ 20 (DaijiworldNews/PY): ಸಮಾಜ ಕಣ್ಣಿಗೆ ಬ್ರಿಟಿಷ್ ಪ್ರಜೆ ಭಾರತದಲ್ಲಿ ಮಾಡುತ್ತಿದ್ದದ್ದು ಸಮಾಜ ಸೇವೆ, ಶಿಕ್ಷಣ ಸೇವೆ..ಆದರೆ ಆತ ನಡೆಸುತ್ತಿದ್ದ ಅನಾಥಶ್ರಮದ ಬಾಲಕನೋರ್ವ ನೋವು ಅನುಭವಿಸಿ ಸತ್ಯ ತಿಳಿಸಿದಾಗಲೇ ಆತ ’ಸೇವಕ’ನಲ್ಲ,’ಕೀಚಕ ’ ಎಂದು ಬಹಿರಂಗವಾಗಿದದ್ದು.!
ಆತನ ಅನಾಚಾರ ಬಹಿರಂಗವಾಗುತ್ತಿದ್ದಂತೆ ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯೇ ಒಡಿಸ್ಸಾದಲ್ಲಿ ಅನಾಥಾಶ್ರಮ ನಡೆಸುತ್ತಿದ್ದ 68 ವರ್ಷದ ಬ್ರಿಟಿಷ್ ಪ್ರಜೆ ಜಾನ್ ಪ್ಯಾಟ್ರಿಕ್ ಬ್ರಿಡ್ಜ್.
ಜಾನ್ ಪ್ಯಾಟ್ರಿಕ್ ಬ್ರಿಡ್ಜ್ ಪಟ್ಟಣದ ಕಾಕ್ಸ್ ಕಾಲೋನಿ ಪ್ರದೇಶವೊಂದರಲ್ಲಿ ಫೇಯ್ತ್ ಔಟ್ರೀಚ್ ಎನ್ನುವ ಅನಾಥಶ್ರಮ ನಡೆಸುತ್ತಿದ್ದು, ಇಲ್ಲಿ ಆತ ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದ. ಅನಾಥಾಶ್ರಮದ ಹೆಸರಿನಲ್ಲಿ ಈತ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕನೇ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಾರ್ಸುಗುಡಾದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಜಾನ್ ಪ್ಯಾಟ್ರಿಕ್ ಬ್ರಿಡ್ಜ್ನ ವಿರುದ್ದ ಪೋಕ್ಸೊ, ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಾರ್ಸುಗುಡ ಎಸ್ಪಿ ರಾಹುಲ್ ಪಿ.ಆರ್ ಹೇಳಿದ್ದಾರೆ.
ಜಾನ್ ಪ್ಯಾಟ್ರಿಕ್ ಬ್ರಿಡ್ಜ್ ಹಾಗೂ ಆತನ ಪತ್ನಿ ಡೆಲ್ಫೈನ್ ಜೊತೆ ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ಜಾರ್ಸುಗುಡಾದಲ್ಲಿ ಫೇಯ್ತ್ ಔಟ್ರೀಚ್ ಅನ್ನು ಪ್ರಾರಂಭಿಸಿದ್ದರು. ಇದರೊಂದಿಗೆ ಶಿಶು ಮಂದಿರವೂ ಇತ್ತು. ಅಲ್ಲದೇ, 400ಕ್ಕೂ ಅಧಿಕ ಬಡ ಮಕ್ಕಳಿಗೆ ಬಟ್ಟೆ, ಶಿಕ್ಷಣ, ವೈದ್ಯಕೀಯ ಆರೈಕೆ ಹಾಗೂ ದೈನಂದಿಂದ ಆಹಾರವನ್ನು ಒದಗಿಸುತ್ತಿತ್ತು.
ಕೊರೊನಾ ವೈರಸ್ ಕಾರಣ ಮಾರ್ಚ್ನಿಂದ ಈ ಅನಾಥಶ್ರಮವನ್ನು ಮುಚ್ಚಲಾಗಿತ್ತು. ಜಾನ್ನ ಬಂಧನದ ಬಗ್ಗೆ ಫೇಯ್ತ್ ಔಟ್ರೀಚ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.