ಬೆಂಗಳೂರು, ಆ 20 (DaijiworldNews/PY): ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ಕೈವಾಡವಿದೆ ಎನ್ನುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳ ಕೊರತೆ ಇದೆ. ಹಾಗಾಗಿ ಸದ್ಯಕ್ಕೆ ಎಸ್ಡಿಪಿಐ ನಿಷೇಧ ಸಾಧ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ. ಮಾಧುಸ್ವಾಮಿ ಹೇಳಿದ್ದಾರೆ.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಎಸ್ಡಿಪಿಐ ಒಂದು ಸಂಘಟನೆ ಮಾತ್ರವಲ್ಲ ಬದಲಾಗಿ ಅದು ಒಂದು ರಾಜಕೀಯ ಪಕ್ಷವೂ ಆಗಿದೆ. ಈ ನಿಟ್ಟಿನಲ್ಲಿ ಎಸ್ಡಿಪಿಐ ಅನ್ನು ನಿಷೇಧಿಸುವ ವಿಚಾರದಲ್ಲಿ ಕಾನೂನಿನ ಅವಕಾಶವಿದೆಯೇ ಎನ್ನುವುದನ್ನು ಕೂಡಾ ಪರಿಶೀಲನೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಎಸ್ಡಿಪಿಐ ನಿಷೇಧದ ವಿಚಾರವಾಗಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ದಿಷ್ಟವಾದ ತೀರ್ಮಾನ ತೆಗೆದುಕೊಂಡಿಲ್ಲ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ಕೈವಾಡವಿದೆ ಎನ್ನುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳ ಕೊರತೆ ಇದೆ. ಹಾಗಾಗಿ ಸದ್ಯಕ್ಕೆ ಎಸ್ಡಿಪಿಐ ನಿಷೇಧ ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತವಾದ ಸಾಕ್ಷ್ಯಾಧಾರಗಳು ದೊರೆತಲ್ಲಿ ಎಸ್ಡಿಪಿಐಯನ್ನು ನಿಷೇಧಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಇನ್ನೂ ಈ ಸಂಘಟನೆಯು ಗಲಭೆ ಪ್ರಕರಣದಲ್ಲಿ ಶಾಮೀಲು ಆಗಿದೆ ಎನ್ನುವ ವಿಚಾರ ಸಾಬೀತಾದ ಪಕ್ಷದಲ್ಲಿ ರಾಜ್ಯ ಸರ್ಕಾರ ಎಸ್ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯ ವೇಳೆ ಉಂಟಾದ ಆಸ್ತಿ ಹಾನಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಗೃಹ ಸಚಿವರಿಂದ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.