ಶ್ರೀನಗರ್,ಆ. 20(DaijiworldNews/HR): ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಸಜ್ಜಾದ್ ಹೈದರ್ ಸೇರಿ ಮೂರು ಜನ ಉಗ್ರರು ಭದ್ರತಾ ಪಡೆಯ ಎನ್ ಕೌಂಟರ್ ಗೆ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರ ಡಿಜಿಪಿ ಡಿಲ್ಬಾಗ್ ಸಿಂಗ್, ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೊಯ್ಬಾದ ಉತ್ತರ ಕಾಶ್ಮೀರದ ಮುಖ್ಯ ಕಮಾಂಡರ್ ಸಜ್ಜಾದ್ ಹೈದರ್, ಮತ್ತು ಆತನ ಪಾಕಿಸ್ತಾನಿ ಸಹಚರ ಉಸ್ಮಾನ್ ಹಾಗೂ ಸಹಾಯಕ ಅನೈತ್ ಉಲ್ಲಾ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಆರು ಜನ ಉಗ್ರರು ಕಳೆದ ನಾಲ್ಕು ದಿನಗಳಲ್ಲಿ ನಡೆದ ಮೂರು ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿರುವ ಪ್ರಮುಖ ಹತ್ತು ಪ್ರಮುಖ ಉಗ್ರರ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ಆರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಇನ್ನು ಸಜ್ಜಾದ್ ಹೈದರ್ ಅನೇಕ ಕಾಶ್ಮೀರಿ ಯುವಕರನ್ನುಜಿಹಾದ್ ಗೆ ಸೆಳೆಸಿದ್ದ, ಇದೀಗ ಅವನ ಸಾವಿನಿಂದ ಸ್ಥಳೀಯರಿಗೆ ಮತ್ತು ಹಲವು ಯುವಕರಿಗೆ ನಿರಾಳತೆ ತಂದಿದೆ ಎಂದರು.
ಇಂದು ಬೆಳಗ್ಗೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿಯೂ ಎನ್ ಕೌಂಟರ್ ನಡೆದಿದ್ದು ಉಗ್ರನೊಬ್ಬ ಸಾವನ್ನಪ್ಪಿದ್ದಾನೆ, ಹತ್ಯೆಗೀಡಾದ ಪಾಕಿಸ್ತಾನಿ ಭಯೋತ್ಪಾದಕನನ್ನು ಡ್ಯಾನೀಶ್ ಎಂದು ಗುರುತಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಇಂದು ತಿಳಿಸಿದ್ದರು.