ಸಂಭಾಲ್, ಆ 21 (Daijiworld News/MSP): ವಿಚ್ಚೇದನಕ್ಕೆ ಮಹಿಳೆಯೊಬ್ಬಳು ನೀಡಿದ ಕಾರಣ ಕಂಡು ನಾಯ್ಯಾಧೀಶರೇ ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಕೊನೆಗೆ ಇದೊಂದು ಕ್ಷುಲ್ಲಕ ಕಾರಣ ಎಂದು ಅರ್ಜಿಯನ್ನೇ ತಿರಸ್ಕರಿಸಿದ್ದಾರೆ.
ವಿವಾಹವಾಗಿ 18 ತಿಂಗಳಲ್ಲೇ ಮಹಿಳೆಯು " ಗಂಡನ ಪ್ರೀತಿ ಅರಗಿಸಿಕೊಳ್ಳಲಾಗುತ್ತಿಲ್ಲ, ನನ್ನೊಂದಿಗೆ ಎಂದೂ ಜಗಳವಾಡಿಲ್ಲ, ಆತನ ಅತಿಯಾದ ಪ್ರೀತಿ ಉಸಿರುಗಟ್ಟಿಸುವಂತಿದೆ" ಎಂಬ ಕಾರಣ ನೀಡಿ ಶರಿಯಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು. ಆದರೆ ಆಕೆ ನೀಡಿದ ಕಾರಣಗಳನ್ನು ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾಗಿದ್ದು, ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ, ಬೇರೆ ಬಲವಾದ ಕಾರಣಗಳಿವೆಯೇ ಎಂದು ಪ್ರಶ್ನಿಸಿದ್ದು, ಬೇರೆ ಯಾವುದೇ ಕಾರಣವಿಲ್ಲ ಎಂದು ಮಹಿಳೆ ಹೇಳಿದ್ದರಿಂದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಶರಿಯಾ ಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ ಸುಮ್ಮನಾಗದ ಮಹಿಳೆ, ಸ್ಥಳೀಯ ಪಂಚಾಯಿತಿನಲ್ಲಿ ದೂರು ನೀಡಿದ್ದು, ಆಗ ಊರಿನ ಮುಖಂಡರು ಸಹ ಈ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳಲು ತಮ್ಮ ಅಸಮರ್ಥತೆಯನ್ನು ಹೊರ ಹಾಕಿದ್ದಾರೆ
'ಉಸಿರುಗಟ್ಟಿದ ಭಾವನೆ'
ಷರಿಯಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ, ಮಹಿಳೆ ತನ್ನ ಗಂಡನ ಪ್ರೀತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾಳೆ. "ಅವನು (ಗಂಡ) ಎಂದಿಗೂ ನನ್ನ ಮೇಲೆ ಕೂಗಾಡಲಿಲ್ಲ, ಅಥವಾ ಯಾವುದೇ ವಿಷಯದ ಬಗ್ಗೆ ಅವನು ನನ್ನನ್ನು ನಿರಾಶೆಗೊಳಿಸಲಿಲ್ಲ. ಕೆಲವೊಮ್ಮೆ ಅವನು ನನಗಾಗಿ ಅಡುಗೆ ಮಾಡುತ್ತಾನೆ, ಮನೆಕೆಲಸಗಳನ್ನು ಮಾಡಲು ಸಹಕರಿಸುತ್ತಾನೆ.
ನಾನು ಯಾವಾಗಲೂ, ಯಾವುದೇ ತಪ್ಪು ಮಾಡಿದರೂ, ಏನೂ ಅನ್ನುವುದಿಲ್ಲ, ಕ್ಷಮಿಸಿಬಿಡುತ್ತಾನೆ. ನಾನು ಅವನೊಂದಿಗೆ ವಾದ ಮಾಡತೊಡಗಿದರು ಸುಮ್ಮನಿರುತ್ತಾನೆ. ಎಲ್ಲದಕ್ಕೂ ಒಪ್ಪಿಗೆ ಸೂಚಿಸುವ, ಸಹಿಸಿಕೊಳ್ಳುವ ಪತಿಯೊಂದಿಗೆ ಸಂಸಾರ ನಡೆಸುವ ಅಗತ್ಯ ನನಗಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಾಗುತ್ತಿದೆ ಎಂದು ಮಹಿಳೆ ವಿವರಿಸಿದ್ದಾಳೆ.