ಬೆಂಗಳೂರು, ಆ 21 (DaijiworldNews/PY): ವಿಧ್ವಂಸಂಕ ಕೃತ್ಯದೊಂದಿಗೆ, ಉಗ್ರರಿಗೆ ವೈದ್ಯಕೀಯ ಸೇವೆ ನೀಡಲು ಆಪ್ ಅಭಿವೃದ್ದಿಪಡಿಸುತ್ತಿದ್ದ ಬಂಧಿತ ನೇತ್ರ ತಜ್ಞ, ಇದರೊಂದಿಗೆ ಬೆಂಗಳೂರು ಸೇರಿದಂತೆ ವಿಶ್ವದಾದ್ಯಂತ ದಾಳಿ ನಡೆಸಲು ಸಂಚು ನಡೆಸಿದ್ದ ಎನ್ನುವ ಮಾಹಿತಿ ಎನ್ಐಎ ಪ್ರಾಥಮಿಕ ತನಿಖೆಯ ಸಂದರ್ಭ ಬಹಿರಂಗವಾಗಿದೆ.
ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ನೇತ್ರ ವೈದ್ಯ ಐಸಿಸ್ ಕಾರ್ಯಕರ್ತರಿಗೆ ಸಹಾಯ ಮಾಡಲು ಭಾರತದ ಟೆಲಿಗ್ರಾಂ ಮತ್ತು ವಿದೇಶದ ತ್ರೀಮಾ ಆ್ಯಪ್ ಮೂಲಕ ಮಾತ್ರ ಸಂಪರ್ಕಸುತ್ತಿದ್ದ. ಈತ ಆ.5ರಂದು ಅಯೋಧ್ಯೆಯಲ್ಲಿ ನಡೆದ ಸಮಾರಂಭದ ಮುನ್ನ ಅಥವಾ ಅದರ ನಂತರ ಕೃತ್ಯವೆಸಗಲು ಯೋಜಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಕೈಗೊಂಡ ಕಾರಣ ಈತನಿ ದಾಳಿ ನಡೆಸಲು ಸಾಧ್ಯವಾಗಿಲ್ಲ.
ಅಬ್ದುಲ್ ರೆಹಮಾನ್ನ ಲ್ಯಾಪ್ಟಾಪ್ ಸೇರಿದಂತೆ ಮೊಬೈಲ್ನಲ್ಲಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯಾಧಾರಗಳು ದೊರೆತಿವೆ. ಅಲ್ಲದೇ, ಐಸಿಸ್ ಉಗ್ರರಿಗೆ ನೆರವಾಗುವು ನಿಟ್ಟಿನಲ್ಲಿ ಆತನೇ ಅಭಿವೃದ್ದಿಪಡಿಸಿರುವ ಆಪ್ಗಳಲ್ಲಿ ಕೂಡಾ ಕೆಲವೊಂದು ಮಾಹಿತಿಗಳು ದೊರೆತಿವೆ. ಈತ ಎಂಬಿಬಿಎಸ್ ಮುಗಿಸಿದ ನಂತರ 2014ರಲ್ಲಿ ಸಿರಿಯಾಕ್ಕೆ ಹೋಗಿದ್ದು, ಅಲ್ಲಿ ಆತ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದ. ಅಲ್ಲದೇ, ಗಾಯಾಳುಗಳಾದ ಉಗ್ರರಿಗೆ ಚಿಕಿತ್ಸೆ ಕೂಡಾ ನೀಡುತ್ತಿದ್ದ ಎಂದು ಎನ್ಐಎ ಮೂಲಗಳು ಹೇಳಿವೆ.
ಆರೋಪಿಯು 22ನೇ ವಯಸ್ಸಿನಲ್ಲಿ ಸಿರಿಯಾದ ಕ್ಯಾಂಪ್ನಲ್ಲಿ ಪಾಲ್ಗೊಂಡಿದ್ದ. ಆದರೆ, ಎರಡು ವರ್ಷಗಳಿಂದ ಎನ್ಐಎ ಈತನ ಚಟುವಟಿಕೆಗಳು, ಚಲನವಲನಗಳ ಬಗ್ಗೆ ಗಮನಹರಿಸುತ್ತಲೇ ಇತ್ತು. ಅಲ್ಲದೇ, ಈತನೊಂದಿಗೆ ಇನ್ನು ನಾಲ್ವರು ಸಿರಿಯಾ ಶಿಬಿರಕ್ಕೆ ಹೋಗಿದ್ದು, ಅವರ ಬಗ್ಗೆಯೂ ಕೂಡಾ ಎನ್ಐಎ ಕಣ್ಣಿಟ್ಟಿದೆ.
ಇನ್ನು ಈತ ತನ್ನ ಎಲ್ಲಾ ಚಟುವಟಿಕೆಗಳ ಬಗ್ಗೆ ಕೋಡ್ ವರ್ಡ್ಗಳ ಮೂಲಕ ಸಂವಹನ ನಡೆಸುತ್ತಿದ್ದು, ದಿ ಬ್ರೇವ್ ಹಾಗೂ ದಿ ಬ್ರೇವ್ ಬಸವನಗುಡಿ ಎನ್ನುವ ಕೋರ್ಡ್ ವರ್ಡ್ ಬಳಸಿ ಸಂವಹನ ನಡೆಸುತ್ತಿದ್ದ. ಅಲ್ಲದೇ ಸ್ವತಃ ಈತ ಅಭಿವೃದ್ದಿಪಡಿಸಿದ್ದ ಆಪ್ಗಳಲ್ಲಿ ಸ್ಯಾಟಲೈಟ್ ಕರೆಗಳನ್ನು ಮೊಬೈಲ್ನಲ್ಲಿ ಸ್ವೀಕರಿಸುವಂತ ತಂತ್ರಾಂಶವನ್ನು ರೂಪಿಸಿದ್ದು, ಸ್ಯಾಟಲೈಟ್ನ ಪ್ರಯೋಗ ಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಐಎಸ್ಕೆಪಿ ಸಂಘಟನೆಯು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದ ನಾನಾಕಡೆ ನಡೆಯುತ್ತಿದ್ದ ವೇಳೆ ದಾಳಿ ನಡೆಸಲು ಯೋಜಿಸಿತ್ತು. ಕಾಶ್ಮೀರ ಮೂಲದ ಜಹಾನ್ಝೈಬ್ ಸಾಮಿ ವಾನಿ ಹಾಗೂ ಆತನ ಪತ್ನಿ ಹೀನಾ ಬಶೀರ್ ಬೇಗ್ರನ್ನು ಎನ್ಐಎ ದೆಹಲಿಯಲ್ಲಿ ಬಂಧಿಸಿತ್ತು. ಇವರಿಗೆ ತಿಹಾರ್ ಜೈಲಿನಲ್ಲಿರುವ ಓರ್ವ ಐಸಿಸ್ ಮುಖಂಡ ಅಬ್ದುಲ್ ಬಶೀತ್ ಎಂಬಾತನ ಪರಿಚಯವಾಗಿತ್ತು. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದ ಸಂದರ್ಭ ಪುಣೆ ಹಾಗೂ ಬೆಂಗಳೂರಿನಲ್ಲಿ ಇವರ ಜಾಲ ಇರುವುದು ತಿಳಿದು ಬಂದಿದ್ದು, ವೈದ್ಯ ಅಬ್ದುಲ್ ರೆಹಮಾನ್ನನ್ನು ಬಂಧಿಸಲಾಗಿದೆ.