ಬೆಂಗಳೂರು, ಆ 21 (DaijiworldNews/PY): ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಂಟೈನ್ಮೆಂಟ್ ಝೋನ್ಗಳನ್ನು ನಿರ್ವಹಿಸಲು ಕಷ್ಟವಾಗುತ್ತಿರುವ ಕಾರಣ ರಾಜ್ಯದಲ್ಲಿ ಬಫರ್ ಝೋನ್ 500 ಮೀ ನಿಂದ 200 ಮೀಟರ್ ಇಳಿಕೆ ಮಾಡಿ ಸರ್ಕಾರ ಪರಿಷ್ಕೃತವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಈ ಹಿಂದೆ ಮಾರ್ಗ ಸೂಚಿಯ ಅನ್ವಯ ಕೊರೊನಾ ಸೋಂಕಿತನ ಮನೆಯಿಂದ 100 ಮೀ. ಪ್ರದೇಶ ಕಂಟೈನ್ಮೆಂಟ್ ಝೋನ್ ಎಂದಾಗಿತ್ತು. ಆದರೆ, ಈಗ ಪ್ರಕಟಿಸಿದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಮನೆಯ ಸುತ್ತಲಿನ ನಿರ್ದಿಷ್ಟ ಪ್ರದೇಶ ಮಾತ್ರವೇ ಕಂಟೈನ್ಮೆಂಟ್ ಝೋನ್ ಆಗಿರುತ್ತದೆ. ಇದರೊಂದಿಗೆ ಕಂಟೈನ್ಮೆಂಟ್ ಝೋನ್ನಲ್ಲಿ 14 ದಿನಗಳ ನಂತರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದೇ ಇದ್ದ ಸಂದರ್ಭ ಸಾಮಾನ್ಯ ಸ್ಥಿತಿಗೆ ಮರಳಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ವಸತಿ ಸಮುಚ್ಚಯಗಳಾದರೆ ಸೋಂಕಿತರ ಮನೆ ಇರುವ ಮಹಡಿ, ಸ್ವತಂತ್ರ ಮನೆಯಾದರೆ ಆ ಮನೆ, ಕೊಳಗೇರಿ ಪ್ರದೇಶವಾದರೆ ಮನೆ ಇರುವ ಬೀದಿ, ಗ್ರಾಮೀಣ ಭಾಗವಾದರೆ ಸೋಂಕಿತರ ಮನೆ ಅಥವಾ ಆ ಮನೆಗೆ ಹೊಂದಿಕೊಂಡಿರುವಂತ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ನ ವ್ಯಾಪ್ತಿಗೆ ತರಬೇಕಾಗುತ್ತದೆ.
ಕೊರೊನಾ ಸೋಂಕು ದೃಢಪಟ್ಟಿರುವಂತ ಪ್ರತೀ ಮೆನಯ ಮೇಲೆ ನೋಟಿಸ್ ಅಂಟಿಸಬೇಕು. ಅಲ್ಲದೇ, ಆ ಪ್ರದೇಶಕ್ಕೆ ಯಾರೂ ತೆರಳದಂತೆ ಕ್ರಮಕೈಗೊಳ್ಳಬೇಕು. ಇನ್ನು ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದೃಢವಾದಲ್ಲಿ ಕಾರ್ಯಚರಣೆ ಸಲುವಾಗಿ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ವಿಸ್ತರಣೆ ಮಾಡಬಹುದು ಎಂದು ತಿಳಿಸಿದೆ.