ಮೈಸೂರು, ಆ 21 (Daijiworld News/MSP) : ನಂಜನಗೂಡು ತಾಲೂಕಿನ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿ ಮಾಧ್ಯಮ ಪ್ರಕಟನೆ ಹೊರಡಿಸಿದ್ದು , ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೩೦ ಲಕ್ಷ ಹಣವನ್ನು ಮಂಜೂರು ಮಾಡಲಾಗುವುದು ಹಾಗೂ ಅವರ ಕುಟುಂಬಕ್ಕೆ ಉದ್ಯೋಗವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರು ಕೊವಿಡ್-19 ಕೆಲಸದಲ್ಲಿ ಸಕ್ರಿಯರಾಗಿದ್ದರು. ಕೆಲಸದ ಒತ್ತಡ ಹಾಗೂ ಶೇ.60ರಷ್ಟು ಹುದ್ದೆ ಖಾಲಿ ಇರುವಾಗ ಆಯಂಟಿಜನ್ ಕಿಟ್ ಟೆಸ್ಟ್ಗೆ ಟಾರ್ಗೆಟ್ ಕೊಟ್ಟು ಮತ್ತಷ್ಟು ಒತ್ತಡ ಹೇರಲಾಗಿದೆ . ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಮಿಶ್ರಾ ಅವರನ್ನು ಸಸ್ಪೆಂಡ್ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನೊಂದೆಡೆ ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರ ಅವರು ನೇರವಾಗಿ ಆರೋಪ ಮಾಡಿದ್ದು, ಮೈಸೂರು ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರೇ ನಾಗೇಂದ್ರ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಸುಧಾಕರ್ ಅವರು ಟ್ವೀಟ್ ಮಾಡಿದ್ದು "ಡಾ.ನಾಗೇಂದ್ರ ಸಾವಿನ ನೋವು ಒಬ್ಬ ವೈದ್ಯನಾಗಿ ನನಗೂ ಅರ್ಥವಾಗುತ್ತದೆ. ಶಾಂತಿ ಕಾಪಾಡಿ. ಕೋವಿಡ್ ಸಂಕಷ್ಟ ಕಾಲದಲ್ಲಿ ಸಂಯಮದಿಂದ ವರ್ತಿಸಿ. ನಾಗೇಂದ್ರ ಜನಪರ ಅಧಿಕಾರಿ,ಸಹೃದಯಿ, ಅತ್ಯಂತ ಸೂಕ್ಷ್ಮ ಸ್ವಭಾವದವರು ಎಂದು ತಿಳಿಯಿತು. ಅವರ ಸಾವಿನ ತನಿಖೆಗೆ ಆದೇಶಿಸಿದ್ದೇನೆ. ಅವರ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.